KRGRV
Saturday, October 31, 2026
Homeಬೆಂಗಳೂರುವಿಧಾನ ಪರಿಷತ್ ಫಲಿತಾಂಶದ ಬೆನ್ನಲ್ಲೇ ಬಿಜೆಪಿಗೆ ಭೀಮಣ್ಣ ಮೇಟಿ ಸವಾಲು: "ಸಂಸತ್ ವಿಸರ್ಜಿಸಿ ಮತಪತ್ರದ ಚುನಾವಣೆಗೆ...

ವಿಧಾನ ಪರಿಷತ್ ಫಲಿತಾಂಶದ ಬೆನ್ನಲ್ಲೇ ಬಿಜೆಪಿಗೆ ಭೀಮಣ್ಣ ಮೇಟಿ ಸವಾಲು: “ಸಂಸತ್ ವಿಸರ್ಜಿಸಿ ಮತಪತ್ರದ ಚುನಾವಣೆಗೆ ಬನ್ನಿ”

ಬೆಂಗಳೂರು, ಅಕ್ಟೋಬರ್ 30: ರಾಜ್ಯದಲ್ಲಿ ಇತ್ತೀಚೆಗೆ ನಡೆದ ನಾಲ್ಕು ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ರಾಜಕೀಯ ವಾಕ್ಸಮರ ತೀವ್ರಗೊಂಡಿದ್ದು, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ ಅವರು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ನೇರ ಸವಾಲು ಹಾಕಿದ್ದಾರೆ.

ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಅವರು, ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಹಾಗೂ ಮಿತ್ರಪಕ್ಷಗಳಿಗೆ ಅಷ್ಟೊಂದು ಆತ್ಮವಿಶ್ವಾಸವಿದ್ದರೆ ತಕ್ಷಣವೇ ಸಂಸತ್ತನ್ನು ವಿಸರ್ಜಿಸಿ, ಎಲೆಕ್ಟ್ರಾನಿಕ್ ಮತಯಂತ್ರ (EVM) ಬದಲಿಗೆ ಮತಪತ್ರ (Ballot Paper) ಮೂಲಕ ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ.

“ಬಿಜೆಪಿಗೆ ತಕ್ಷಣವೇ ಸಂಸತ್ ವಿಸರ್ಜಿಸಿ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸುವ ತಾಕತ್ತು ಮತ್ತು ಧೈರ್ಯ ಇದೆಯೇ?” ಎಂದು ಪ್ರಶ್ನಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿರುವುದನ್ನು ಉಲ್ಲೇಖಿಸಿದ್ದಾರೆ.

ಈ ಫಲಿತಾಂಶವೇ ಮುಂದಿನ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ಸ್ಥಾನಗಳ ಗೆಲುವನ್ನು ಮುಂದಿನ ವಿಧಾನಸಭೆ ಚುನಾವಣೆಯ ಸೂಚಕ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿರುವುದು ವಾಸ್ತವಕ್ಕೆ ದೂರವಾಗಿದೆ ಎಂದು ಟೀಕಿಸಿರುವ ಭೀಮಣ್ಣ ಮೇಟಿ, “2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್ ಚುನಾವಣೆಯ ಫಲಿತಾಂಶವನ್ನು ಗೌರವಯುತವಾಗಿ ಸ್ವೀಕರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ