ಸಿರವಾರ: ತಾಲೂಕಿನ ಬುಳ್ಳಾಪೂರು, ಕಸನದೊಡ್ಡಿ, ಡೊಣಮರಡಿ, ಕುರುಕುಂದಾ ಹಾಗೂ ಕಲಂಗೇರಾ (ಕುರುಕುಂದಾ ಐಪಿಎಫ್-2) ಗ್ರಾಮಗಳ ತೋಟದ ವಿದ್ಯುತ್ ಹಗಲು ವೇಳೆಯಲ್ಲಿ ಸರಬರಾಜು ಮಾಡುವಂತೆ ಆಗ್ರಹಿಸಿ ರೈತರು ಹಾಗೂ ಸಾರ್ವಜನಿಕರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ರಾಘವೇಂದ್ರ ಖಾಜನಗೌಡ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಒಗ್ಗೂಡಿ ಸಿರವಾರದ ಜೆಸ್ಕಾಂ ಕಾರ್ಯಾಲಯಕ್ಕೆ ತೆರಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕಾರ್ಯಪಾಲನಾ ಉಪ ವಿಭಾಗ, ಜೆಸ್ಕಾಂ ಸಿರವಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೈತರು ಮಾತನಾಡಿ, ತೋಟದ ಬೆಳೆಗಳಿಗೆ ನೀರು ಹಾಯಿಸಲು ರಾತ್ರಿ ವೇಳೆ ವಿದ್ಯುತ್ ಸರಬರಾಜು ಮಾಡುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಿ ತೋಟಗಳಿಗೆ ತೆರಳುವುದು ಅಪಾಯಕಾರಿಯಾಗಿದ್ದು, ಹಾವು-ಹುಳಗಳ ಭೀತಿ ಹಾಗೂ ಸುರಕ್ಷತಾ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ರೈತರ ಅನುಕೂಲಕ್ಕಾಗಿ ಹಗಲು ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಿರವಾರ ತಾಲೂಕು ಅಧ್ಯಕ್ಷ ಕೆ. ರಾಘವೇಂದ್ರ ಖಾಜನಗೌಡ, ಕ.ರ.ವೇ ಉಪಾಧ್ಯಕ್ಷ ನಾಗರಾಜಗೌಡ ಹೀರಾ, ಡೋಣಮರಡಿ ಗ್ರಾಮ ಘಟಕದ ಅಧ್ಯಕ್ಷ ಹನುಮೇಶ, ಬುಳ್ಳಾಪೂರು ಗ್ರಾಮದ ಅಂಜಪ್ಪ, ಮುಕ್ಕಣ್ಣ ಡೋಣಮರಡಿ, ಬಾಬುಸಾಬು ಬುಳ್ಳಾಪೂರು, ತಿಮ್ಮಣ್ಣ ಡೋಣಮರಡಿ, ಹನುಮಂತ, ರಾಜಸಾಬು, ಯಲ್ಲಪ್ಪ, ಮಸ್ತಾನಸಾಬು, ಮಲ್ಲಯ್ಯ, ಶಿವರಾಯ, ಹನುಮಪ್ಪ, ಅದಪ್ಪ, ಬಾಲುಗೌಡ ಸೇರಿದಂತೆ ವಿವಿಧ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ರೈತರ ಮನವಿಯನ್ನು ಪರಿಗಣಿಸಿ ತೋಟದ ವಿದ್ಯುತ್ ಸರಬರಾಜಿನ ಸಮಯದಲ್ಲಿ ಬದಲಾವಣೆ ಮಾಡಿ ಹಗಲು ವಿದ್ಯುತ್ ನೀಡುವಂತೆ ಜೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

