KRGRV
Thursday, October 15, 2026
Homeಜಿಲ್ಲಾ ಸುದ್ದಿಗಳುಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಬೀದರ್ ಕಲಾವಿದರ ಕಲರವ

ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಬೀದರ್ ಕಲಾವಿದರ ಕಲರವ

ಮೈಸೂರು/ಬೀದರ್, ಅಕ್ಟೋಬರ್ 15: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೀದರ್ ಜಿಲ್ಲೆಯ ನಾಲ್ಕು ಕಲಾ ತಂಡಗಳಿಗೆ ಅವಕಾಶ ದೊರೆತಿದ್ದು, ಜಿಲ್ಲೆಯ ಜಾನಪದ ಮತ್ತು ಸಂಗೀತ ಕಲಾವಿದರು ರಾಜ್ಯದ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.

ಅಕ್ಟೋಬರ್ 11ರಿಂದ 19ರವರೆಗೆ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ, ಅಕ್ಟೋಬರ್ 16ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಸಂಜೆ 6.30ರಿಂದ 7.30ರವರೆಗೆ ಪ್ರಿಯಾಂಕ ಗುರುದೇವ ಮತ್ತು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 17ರಂದು ಮೈಸೂರಿನ ಚಿಕ್ಕಗಡಿಯಾರ ವೇದಿಕೆಯಲ್ಲಿ ಸಂಜೆ 6.30ರಿಂದ 7.30ರವರೆಗೆ ಶಿವಾಜಿರಾವ್ ಸಾಗರ ಮತ್ತು ತಂಡದವರಿಂದ ತಂಬೂರಿ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಅಕ್ಟೋಬರ್ 19ರಂದು ಇದೇ ವೇದಿಕೆಯಲ್ಲಿ ಸಂಜೆ 5ರಿಂದ 5.15ರವರೆಗೆ ಅಶ್ವಿನಿ ಮತ್ತು ತಂಡದವರಿಂದ ಬಂಜಾರ ಕೋಲಾಟ ಪ್ರದರ್ಶನ ನಡೆಯಲಿದ್ದು, ರಾತ್ರಿ 8.30ರಿಂದ 10 ಗಂಟೆಯವರೆಗೆ ವಿಜಯನಗರದ ರಂಗಲೋಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜಾನಪದ ಗೀತೆಗಳ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೀದರ್ ಜಿಲ್ಲೆಯ ಕಲಾವಿದರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ವೇದಿಕೆಯಲ್ಲಿ ಅವಕಾಶ ಕಲ್ಪಿಸಲು ಸಹಕರಿಸಿದ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಅವರಿಗೆ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಿಜಯಕುಮಾರ್ ಸೋನಾರೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಲಾವಿದರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸುವುದು ಕಲೆಯ ಬೆಳವಣಿಗೆಗೆ ಪೂರಕವಾಗಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಬೀದರ್ ಜಿಲ್ಲೆಯ ಕಲಾವಿದರು ಭಾಗವಹಿಸುತ್ತಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದ್ದು, ಇಂತಹ ಅವಕಾಶಗಳು ಸ್ಥಳೀಯ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ ಹಾಗೂ ಪ್ರಸಾರಕ್ಕೆ ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ಅವರು ಅಭಿಪ್ರಾಯಪಟ್ಟರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಜಿಲ್ಲೆಯ ಎಲ್ಲಾ ಕಲಾವಿದರಿಗೆ ಶುಭ ಹಾರೈಸಿದ ವಿಜಯಕುಮಾರ್ ಸೋನಾರೆ, ಅವರ ಪ್ರದರ್ಶನಗಳು ಯಶಸ್ವಿಯಾಗಿ ರಾಜ್ಯದಾದ್ಯಂತ ಮೆಚ್ಚುಗೆ ಗಳಿಸಲಿ ಎಂದು ಆಶಿಸಿದರು.

ಹೆಚ್ಚಿನ ಸುದ್ದಿ