KRGRV
Monday, December 23, 2024
Homeಸಿನಿಮಾಯುಐ ಚಿತ್ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಸಿಹಿ ಸುದ್ದಿ ನೀಡಿದ ಉಪ್ಪಿ

ಯುಐ ಚಿತ್ರ ವರಮಹಾಲಕ್ಷ್ಮೀ ಹಬ್ಬದ ದಿನದಂದು ಸಿಹಿ ಸುದ್ದಿ ನೀಡಿದ ಉಪ್ಪಿ

ವರಮಹಾಲಕ್ಷ್ಮೀ ಹಬ್ಬದ ದಿನವಾದ ಶುಕ್ರವಾರ ಹೊಸ ಪೋಸ್ಟರ್ ಜೊತೆಗೆ ಯುಐ ಚಿತ್ರ ಯಾವ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಘೋಷಿಸುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ
ವಿಭಿನ್ನ ಕತೆ, ಚಿತ್ರಕಥೆ ಜೊತೆಗೆ ತಲೆಗೆ ಹುಳ ಬಿಡುವ ರೀತಿಯ ಪೋಸ್ಟರ್ ಗಳ ಮೂಲಕ ಸದಾ ಗಮನ ಸೆಳೆಯುವ ಉಪೇಂದ್ರ ಹಲವು ವರ್ಷಗಳ ನಂತರ ಮತ್ತೆ ನಟನೆ ಮತ್ತು ನಿರ್ದೇಶನ ಮಾಡಿರುವ ಯುಐ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ.

ಸಿಂಹಾಸನದ ಮೇಲೆ ಆಸೀನರಾಗಿ ಕೈಯಲ್ಲಿ ಖಡ್ಗ ಹಿಡಿದಿರುವ ಉಪೇಂದ್ರ ತಲೆಯ ಮೇಲೆ ವಿಚಿತ್ರ ಕೊಂಬುಗಳ ಕಿರೀಟ ಧರಿಸಿದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಯುಐ ಸಿನಿಮಾ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ ಎಂದು ಪೋಸ್ಟರ್ ಜೊತೆ ತಿಂಗಳು ಘೋಷಣೆ ಮಾಡಿದ್ದರೂ ನಿರ್ದಿಷ್ಟ ದಿನಾಂಕ ಪ್ರಕಟಿಸದೇ ಮತ್ತೆ ಕುತೂಹಲ ಮೂಡಿಸಿದ್ದಾರೆ.

ಅಕ್ಟೋಬರ್ ನಲ್ಲಿ ಭಾರೀ ಕುತೂಹಲ ಮೂಡಿಸಿರುವ ಧ್ರುವ ಸರ್ಜಾ ನಟಿಸಿರುವ ಮಾರ್ಟಿನ್ ಚಿತ್ರ ಕೂಡ ಬಿಡುಗಡೆ ಆಗಲಿದ್ದು, ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಲಿವೆಯೇ ಎಂಬ ಕುತೂಹಲ ಮೂಡಿಸಿದೆ.

ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಈ ಚಿತ್ರವನ್ನು ಲಹರಿ ಸಂಸ್ಥೆ ಮತ್ತು ಕೆ ಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತವಿದೆ. ಚಿತ್ರ ವೈರಲ್ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ.

ಹೆಚ್ಚಿನ ಸುದ್ದಿ