ಕೆಜಿಎಫ್: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವತ್ತೂ ರಾಜ್ಯದ ರೈತರ ಸಮಸ್ಯೆ ಏನು ಅಂತ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ಇಲ್ಲಿನ ಬೆತ್ತಮಂಗಲದಲ್ಲಿ ಇಂದು ನಡೆದ ಸೇವಾ ಸಂಕಲ್ಪ ಅಭಿಯಾನ ಮತ್ತು ಬೂತ್ ವಿಜಯ ಸಂಕಲ್ಪ ಯಾತ್ರೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಸಿಎಂ ಆಗಿದ್ದಾರೆ ಎಂದು ಅವರು ಟೀಕಿಸಿದರು.
ಕಾರ್ಯಕರ್ತರ ಚುನಾವಣೆ ಎನಿಸಿದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯ ಚುನಾವಣೆ ಸದ್ಯದಲ್ಲೇ ಬರಲಿದೆ. ಹಲವು ವರ್ಷಗಳಿಂದ ಬಿಜೆಪಿ ಸಂಘಟನೆ ಬಲಪಡಿಸಿದ ಕಾರ್ಯಕರ್ತರನ್ನು ಆಯ್ಕೆ ಮಾಡಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ನುಡಿದರು.
ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಪಕ್ಷ ಶೋಷಿತ- ಪೀಡಿತ ಸಮುದಾಯಗಳನ್ನು ಓಟಿಗಾಗಿ ದುರುಪಯೋಗ ಮಾಡಿಕೊಂಡಿದೆ. ಅಧಿಕಾರಕ್ಕೆ ಬಂದ ಬಳಿಕ ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಎಸ್ಸಿಪಿ, ಟಿಎಸ್ ಪಿಯ ಸಾವಿರಾರು ಕೋಟಿ ರೂಪಾಯಿಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ಆಕ್ಷೇಪಿಸಿದರು.
ಬರಪೀಡಿತ ರೈತರಿಗೆ ಸಮರ್ಪಕ ಪರಿಹಾರ ಕೊಡಬೇಕು. ಸರಿಯಾಗಿ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇರತಕ್ಕಂತ ಅನ್ನದಾತ ರೈತರು ಈ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕಿತ್ತು ಎಸೆಯುವಂತಹ ಕೆಲಸ ಮಾಡಲಿದ್ದಾರೆ. ಮುಖ್ಯಮಂತ್ರಿಯವರ ಮತ್ತೆ ಅಧಿಕಾರ ಹಿಡಿಯುವ ಕನಸು ನನಸಾಗುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.
ಕಳೆದ ಮೂರು ವರ್ಷಗಳಲ್ಲಿ ಗ್ಯಾರೆಂಟಿ ಗ್ಯಾರೆಂಟಿ ಅಂತ ಹೇಳಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ವಿಧವಾ ವೇತನ, ಸ್ವಾತಂತ್ರ್ಯ ಯೋಧರ ಗೌರವಧನವನ್ನು ಇವರು ನೀಡುತ್ತಿಲ್ಲ. ಬರಗಾಲದ ಸಂದರ್ಭದಲ್ಲಿ ಹೈನುಗಾರ ರೈತಾಪಿ ವರ್ಗಕ್ಕೆ ಸಹಾಯಧನವನ್ನೂ ಸ್ಥಗಿತಗೊಳಿಸಿದ್ದಾರೆ ಎಂದು ಟೀಕಿಸಿದರು.
ಡಾ.ಬಾಬಾಸಾಹೇಬ್ ಅಂಬೇಡ್ಕರರಿಗೆ ಅವಮಾನ
ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಎರಡು ಬಾರಿಯೂ ಅವರನ್ನು ಸೋಲಿಸಿದ ಅಪಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಆದರೆ, ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವು ಶೋಷಿತ ಸಮುದಾಯಗಳನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ ಎಂದು ದೂರಿದರು.
ಪ್ರಧಾನಸೇವಕರಾಗಿ ಕೆಲಸ
ನರೇಂದ್ರ ಮೋದಿಜೀ ಅವರು ದೇಶದ ಪ್ರಧಾನಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಅವರು 25 ವರ್ಷಗಳ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಅವರು ದೇಶದ ಪ್ರಧಾನಮಂತ್ರಿಯಲ್ಲ; ಪ್ರಧಾನ ಸೇವಕ ಅಂತ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಜಿ ಅವರ ಆಶಯದಂತೆ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಭಾರತಕ್ಕೆ ಭವಿಷ್ಯವೇ ಇಲ್ಲ ಎಂಬ ಪರಿಸ್ಥಿತಿ ಹಿಂದೆ ಇತ್ತು. ಆದರೆ, ಮೋದಿಜೀ ಅವರು 2014 ರಲ್ಲಿ ಪ್ರಧಾನಿ ಆದ ಬಳಿಕ ಈ ದೇಶಕ್ಕೂ ಕೂಡ ಒಂದು ಉಜ್ವಲ ಭವಿಷ್ಯವಿದೆ ಎಂಬ ಆಶಯ ಮೂಡಿತು ಎಂದು ತಿಳಿಸಿದರು. 2047ಕ್ಕೆ ವಿಕಸಿತ, ಅಭಿವೃದ್ಧಿಶೀಲ ದೇಶವನ್ನು ನಿರ್ಮಿಸಲು ಮೋದಿಜೀ ಅವರು ಸಂಕಲ್ಪ ಮಾಡಿದ್ದಾರೆ ಎಂದರು.
ಯುದ್ಧ ಸೇರಿ ಅನೇಕ ಜಾಗತಿಕ ಸವಾಲುಗಳು ಭಾರತದ ಎದುರಿದ್ದರೂ ಅದು ಆರ್ಥಿಕ ಕ್ಷೇತ್ರದಲ್ಲಿ ಸಮರ್ಥ ಸಾಧನೆ ಮಾಡುತ್ತಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ಆರೋಗ್ಯ ಆಯುಷ್ಯದೊಂದಿಗೆ ಪೂರ್ಣ ಶಕ್ತಿಯನ್ನು ಕೊಡಿ ಅಂತ ಪ್ರಾರ್ಥನೆ ಮಾಡಿ ಸೆಪ್ಟೆಂಬರ್ 17ನೇ ತಾರೀಕಿನಿಂದ ಅಕ್ಟೋಬರ್ 17 ತಾರೀಕಿನವರೆಗೆ ಸೇವಾ ಸಂಕಲ್ಪ ಅಭಿಯಾನ ಮಾಡುತ್ತಿರುವುದಾಗಿ ತಿಳಿಸಿದರು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಅವರು ಮನವಿ ಮಾಡಿದರು.

