KRGRV
Sunday, November 1, 2026
Homeಬೆಂಗಳೂರುವಿಧಾನಸೌಧದಲ್ಲೇ ನೀರು ಸೋರಿಕೆ: ಸಭಾಪತಿ ಸಂಚರಿಸುವ ಮಾರ್ಗದಲ್ಲೂ ನಿರ್ಲಕ್ಷ್ಯ ಆರೋಪ

ವಿಧಾನಸೌಧದಲ್ಲೇ ನೀರು ಸೋರಿಕೆ: ಸಭಾಪತಿ ಸಂಚರಿಸುವ ಮಾರ್ಗದಲ್ಲೂ ನಿರ್ಲಕ್ಷ್ಯ ಆರೋಪ

ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಕೇಂದ್ರ ಹಾಗೂ ಪಾರಂಪರಿಕ ಹೆಗ್ಗಳಿಕೆಯ ವಿಧಾನಸೌಧ ಕಟ್ಟಡದಲ್ಲೇ ನೀರು ಸೋರಿಕೆ ಕಂಡುಬಂದಿರುವುದು ನಿರ್ವಹಣಾ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ವಿಧಾನ ಪರಿಷತ್ ಉಪಹಾರ ಗೃಹದ ಬಾಗಿಲಿನ ಎದುರು ನೀರು ಸೋರಿಕೆಯಾಗುತ್ತಿದ್ದು, ಸೋರಿಕೆಯಾಗುತ್ತಿರುವ ನೀರನ್ನು ಸಂಗ್ರಹಿಸಲು ಸ್ಥಳದಲ್ಲಿ ಬೋಗುಣಿ ಇಡಲಾಗಿದೆ.

ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರು ಸಂಚರಿಸುವ ಪ್ರಮುಖ ಮಾರ್ಗದಲ್ಲೇ ಈ ನೀರು ಸೋರಿಕೆ ಕಂಡುಬಂದಿದೆ. ಸೋರಿಕೆಯಾಗುತ್ತಿರುವ ಸ್ಥಳದ ಮೂಲಕವೇ ಸಾಗಿದ ಸಭಾಪತಿಗಳು ಸ್ಥಳವನ್ನು ಗಮನಿಸುತ್ತಾ ಮುಂದೆ ಸಾಗಿದ ದೃಶ್ಯ ಕಂಡುಬಂದಿದೆ.

ರಾಜ್ಯದ ಪ್ರತಿಷ್ಠೆಯ ಪ್ರತೀಕವಾಗಿರುವ ವಿಧಾನಸೌಧ ಕಟ್ಟಡದ ನಿರ್ವಹಣೆಯ ಹೊಣೆ ಹೊತ್ತಿರುವ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡದ ಸಂರಕ್ಷಣೆ ಮತ್ತು ನಿರ್ವಹಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಮುಖ ಗಣ್ಯರು ಹಾಗೂ ಜನಪ್ರತಿನಿಧಿಗಳು ಸಂಚರಿಸುವ ಸ್ಥಳದಲ್ಲೇ ಇಂತಹ ಸಮಸ್ಯೆ ಎದುರಾಗಿರುವುದು ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ನೀರು ಸೋರಿಕೆಗೆ ಕಾರಣವೇನು ಎಂಬುದನ್ನು ಪರಿಶೀಲಿಸಿ, ತಕ್ಷಣ ದುರಸ್ತಿ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಹೆಚ್ಚಿನ ಸುದ್ದಿ