ದಿನಕ್ಕೊಂದು ಕಥೆ : ಗುರು ವಾಣಿ
ಒಂದು ಊರಲ್ಲಿ ಗುರುಬಸಪ್ಪ ಗುರುಲಿಂಗವ್ವ ಎಂಬ ಗಂಡಹೆಂಡತಿಯರಿದ್ದರು. ಗುರುಬಸಪ್ಪನಂತೂ ತನ್ನ ಹೆಂಡತಿಯನ್ನು ಇನ್ನೊಬ್ಬರ ಎದುರಿನಲ್ಲಿ ಎಷ್ಟು ಹೊಗಳಿದರೂ ತೀರುತ್ತಿರಲಿಲ್ಲ. ಒಂದು ದಿನ ತನ್ನ ಗುರುಗಳ ಬಳಿಗೆ ಹೋದಾಗಲೂ ಕೂಡಾ ಅವನು ತನ್ನ ಹೆಂಡತಿಯ ವರ್ಣನೆಯನ್ನು ಮಾಡುತ್ತಾ “ನನ್ನ ಹೆಂಡತಿಯು ನನಗೆ ಪ್ರಾಣಕ್ಕೆ ಪ್ರಾಣ ಕೊಡಬಲ್ಲಳು” ಎಂದ. ಆಗ ಗುರುಗಳು “ನೀನು ಇಷ್ಟು ಹೆಂಡತಿಯನ್ನು ಹೊಗಳುತ್ತಿರುವಿ ಎಂದಮೇಲೆ ಪರೀಕ್ಷೆಮಾಡಬೇಕು” ಎಂದು ಹೇಳಿ ಗುರುಬಸಪ್ಪನಿಗೆ ಯೋಗಸಾಧನೆಯನ್ನು ಕಲಿಸಿಕೊಟ್ಟು, “ಮನೆಗೆ ಹೋಗಿ ಪ್ರಾಣವಾಯು ವನ್ನು ಮಸ್ತಕಕ್ಕೆ ಏರಿಸಿ ಸತ್ತವರಂತೆ ಬೀಳು” ಎಂದು ಹೇಳಿ ಕಳಿಸಿದರು.
ಗುರುಬಸಪ್ಪ ತನ್ನ ಹೆಂಡತಿಯ ಪ್ರೇಮ ಪರೀಕ್ಷಿಸಲು ಗುರುಗಳು ಹೇಳಿದಂತೆ ಮಾಡಿದ. ಓಣಿಯಲ್ಲಿ ಎಲ್ಲ ಬಂಧುಬಳಗದವರು ಮರುಗಿದರು. ಅಳುವವರು ಅತ್ತರು. ಬಂಧುಬಳಗದವರು ಸಹಿತವಾಗಿ ಬಹಳವಾಗಿ ಅಳತೊಡಗಿದರು. ಹೆಂಡತಿಯು ಸಹಿತ ಘೋರವಾಗಿ ಅಳುತ್ತಿದ್ದಳು. ಈ ಸಮಯದಲ್ಲಿ ಗುರುಗಳು ತಮ್ಮ ಕಮಂಡಲದಲ್ಲಿ ಹಾಲು ಸಕ್ಕರೆಯನ್ನು ಹಾಕಿ ಕೊಂಡು ಬಂದು “ಈ ಕಮಂಡಲದಲ್ಲಿ ಇರುವ ಔಷಧವನ್ನು ಯಾರು ಕುಡಿಯುತ್ತಾರೋ ಅವರು ಸತ್ತು, ಗುರುಬಸಪ್ಪ ಉಳಿಯುತ್ತಾನೆ ಆದ್ದರಿಂದ ಯಾರಾದರೂ ಕುಡಿಯುತ್ತೀರಾ?” ಎಂದು ಕೇಳಿದರು ಕೂಡಲೇ ಓಣಿಯವರೆಲ್ಲ ಹಿಂದೆ ಸರಿದರು. ಬಂಧುಬಳಗದವರಾರೂ ಸನಿಹಕ್ಕೆ ಬರಲಿಲ್ಲ. ಹೆಂಡತಿಯು “ಸತ್ತವರಿಗಾಗಿ ಇದ್ದವರು ಜೀವ ಕೊಡುತ್ತಾರೆಯೇ? ಸತ್ತವರು ಸಾಯಲಿ ಬಿಡ್ರಿ” ಎಂದು ಹೇಳಿದಳು
ಆಗ ಗುರುಗಳು ಶಿಷ್ಯನನ್ನು ಕೂಗಿ “ನೋಡಿದೆ ಏನಪ್ಪಾ ಶಿಷ್ಯ, ನಿನ್ನ ವ್ಯಾಮೋಹವನ್ನು!” ಎಂದು ಅನ್ನಲು ಗುರುಬಸಪ್ಪನಿಗೆ ಸಂಸಾರದಲ್ಲಿ ವಿರಕ್ತಿ ಉಂಟಾಗಿ ಸರ್ವಸಂಗ ಪರಿತ್ಯಾಗಿಯಾಗಿ ಗುರುಗಳ ಸೇವೆಯಲ್ಲಿದ್ದು, ಮುಕ್ತಿಯನ್ನು ಪಡೆದ.
ಡಾ.ಅಭಿನವ ರಾಮಲಿಂಗ ಶಿವಶರಣ ಮಹಾಸ್ವಾಮೀಜಿ.
📞 – 9341137882.

