ವಿಶೇಷ ವರದಿ
ಸಿಮ್ಲಾ: “ಇಂದಿನ ಕಾಲದಲ್ಲಿ ಸಂಬಂಧಗಳಿಗಿಂತ ಹಣಕ್ಕೇ ಹೆಚ್ಚಿನ ಬೆಲೆ ಇದೆಯೇ?” – ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ನಡೆದ ಘಟನೆಯೊಂದು ಸಮಾಜದಲ್ಲಿ ಇಂತಹದೊಂದು ಚರ್ಚೆಯನ್ನು ಹುಟ್ಟುಹಾಕಿದೆ. ನಾಲ್ಕು ವರ್ಷಗಳ ಕಾಲ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿಯೊಬ್ಬಳು, ಕೋಟ್ಯಧಿಪತಿಯ ಐಷಾರಾಮಿ ಜೀವನಕ್ಕೆ ಮರುಳಾಗಿ ಪ್ರೇಮಿಗೆ ಕೈಕೊಟ್ಟು 64 ವರ್ಷದ ವೃದ್ಧನನ್ನು ವರಿಸಿದ ಕಹಿ ಸತ್ಯವೊಂದು ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಇಲ್ಲಿನ ಯುವತಿಯೊಬ್ಬಳು ಕಳೆದ ನಾಲ್ಕು ವರ್ಷಗಳಿಂದ ಯುವಕನೊಬ್ಬನನ್ನು ಗಾಢವಾಗಿ ಪ್ರೀತಿಸುತ್ತಿದ್ದಳು. ಇವರ ಪ್ರೀತಿ-ಪ್ರೇಮದ ವಿಚಾರ ತಿಳಿದು ಯುವತಿಯ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಮಧ್ಯೆ 24 ಕೋಟಿ ರೂಪಾಯಿ ಆಸ್ತಿ, ಐಷಾರಾಮಿ ರೇಂಜ್ ರೋವರ್ ಕಾರು ಹಾಗೂ ಬಂಗ್ಲೆ ಹೊಂದಿರುವ 64 ವರ್ಷದ ಶ್ರೀಮಂತ ವೃದ್ಧನೊಬ್ಬನಿಂದ ಯುವತಿಗೆ ಮದುವೆಯ ಪ್ರಸ್ತಾಪ ಬಂದಿದೆ.
ಕ್ಷಣಾರ್ಧದಲ್ಲಿ ಬದಲಾದ ನಿರ್ಧಾರ:
ಶ್ರೀಮಂತ ಸಂಬಂಧದ ಪ್ರಸ್ತಾಪ ಬರುತ್ತಿದ್ದಂತೆಯೇ ಯುವತಿಯ ನಡವಳಿಕೆಯಲ್ಲಿ ಸಂಪೂರ್ಣ ಬದಲಾವಣೆ ಕಂಡುಬಂದಿದೆ. ಸಾಥ್ ನೀಡಬೇಕಿದ್ದ ಪ್ರೇಮಿಯ ಫೋನ್ ನಂಬರ್ ಹಾಗೂ ಸಾಮಾಜಿಕ ಜಾಲತಾಣದ ಖಾತೆಗಳನ್ನು ತಕ್ಷಣವೇ ಬ್ಲಾಕ್ ಮಾಡಿದ ಆಕೆ, ವೃದ್ಧನೊಂದಿಗೆ ಮದುವೆಯಾಗಲು ಹಸಿರು ನಿಶಾನೆ ತೋರಿದ್ದಾಳೆ.
”ನಿನ್ನೆವರೆಗೂ ಇಡೀ ಜೀವನ ಒಂಟಿಯಾಗಿರುತ್ತೇನೆ, ಮದುವೆಯಾದರೆ ಆತನನ್ನೇ ವರಿಸುತ್ತೇನೆ ಎಂದಿದ್ದವಳು ದಿಢೀರ್ ಒಪ್ಪಲು ಕಾರಣವೇನು?” ಎಂದು ಹೆತ್ತವರು ಪ್ರಶ್ನಿಸಿದಾಗ, “ಈ ಜಗತ್ತಿನಲ್ಲಿ ತಂದೆ-ತಾಯಿಯ ಖುಷಿಗಿಂತ ದೊಡ್ಡದು ಯಾವುದೂ ಇಲ್ಲ” ಎಂಬ ಸಬೂಬು ನೀಡಿ ಆಕೆ ತಲೆತಗ್ಗಿಸಿ ನಡೆದಿದ್ದಾಳೆ.
ಕಣ್ಣೀರಿಟ್ಟ ಪ್ರೇಮಿ:
ಪೋಷಕರು ನಿಗದಿಪಡಿಸಿದಂತೆ ಕಳೆದ ವಾರವೇ ಅದ್ದೂರಿಯಾಗಿ ಮದುವೆ ನೆರವೇರಿದೆ. ಇತ್ತ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಹುಡುಗಿ ಮತ್ತೊಬ್ಬರ ಕೈಹಿಡಿಯುವುದನ್ನು ಆಕೆಯ ಮಾಜಿ ಪ್ರೇಮಿ ಮೂಕಪ್ರೇಕ್ಷಕನಾಗಿ, ಕಣ್ಣೀರು ಹಾಕುತ್ತಾ ದೂರ ನಿಂತು ನೋಡುವಂತಾಯಿತು.
ಆಧುನಿಕ ಯುಗದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಭಾವನೆಗಳಿಗಿಂತ ಹಣ ಮತ್ತು ಐಷಾರಾಮಿ ಜೀವನವೇ ಪ್ರಮುಖ ಎಂಬ ಕಹಿ ಸತ್ಯವನ್ನು ಈ ಘಟನೆ ಎತ್ತಿಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

