ಅಮೇರಿಕ: ‘ವಯಸ್ಸು ಕೇವಲ ಒಂದು ಸಂಖ್ಯೆ ಅಷ್ಟೇ, ದೃಢ ಸಂಕಲ್ಪ ಹಾಗೂ ಸೂಕ್ತ ಹಣಕಾಸಿನ ಶಿಸ್ತಿದ್ದರೆ ಸಾಧನೆಗೆ ವಯಸ್ಸಿನ ಹಂಗಿರುವುದಿಲ್ಲ’ ಎಂಬುದನ್ನು 24 ವರ್ಷದ ಯುವತಿಯೊಬ್ಬರ ಯಶೋಗಾಥೆ ಮತ್ತೊಮ್ಮೆ ಸಾಬೀತುಪಡಿಸಿದೆ. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ, ಅಲ್ಲಿನ ಅತ್ಯಂತ ಸ್ಪರ್ಧಾತ್ಮಕ ಮ್ಯಾನ್ಹ್ಯಾಟನ್ನಲ್ಲಿ ಕನಸಿನ ಉದ್ಯೋಗ ಗಿಟ್ಟಿಸಿಕೊಂಡು, ಕೇವಲ 6 ತಿಂಗಳಲ್ಲಿ ₹45 ಲಕ್ಷ ಶಿಕ್ಷಣ ಸಾಲವನ್ನು ಮರುಪಾವತಿಸಿದ ಅವರ ಸಾಧನೆಯ ಪಯಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ.
ಯುವತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಕಳೆದ ನಾಲ್ಕು ವರ್ಷಗಳ ತಮ್ಮ ಸಾಹಸಮಯ ದಿನಗಳನ್ನು ಸ್ಮರಿಸಿಕೊಂಡಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳುವ ದಿಟ್ಟ ನಿರ್ಧಾರ ಕೈಗೊಂಡಿದ್ದ ಈಕೆ, ಫೈನಾನ್ಸ್ನಲ್ಲಿ ಸ್ನಾತಕೋತ್ತರ ಪದವಿ (ಮಾಸ್ಟರ್ಸ್) ಪಡೆಯಲು ಸುಮಾರು ₹45 ಲಕ್ಷ ಶಿಕ್ಷಣ ಸಾಲ ಮಾಡಿದ್ದರು. 21ನೇ ವಯಸ್ಸಿಗೆ ಯಶಸ್ವಿಯಾಗಿ ಅಭ್ಯಾಸ ಪೂರ್ಣಗೊಳಿಸಿ, ವೃತ್ತಿಜೀವನದ ಹುಡುಕಾಟ ಆರಂಭಿಸಿದ್ದರು.
22ನೇ ಹುಟ್ಟುಹಬ್ಬಕ್ಕೂ ಮುನ್ನವೇ ಮ್ಯಾನ್ಹ್ಯಾಟನ್ನಲ್ಲಿ ಕೆಲಸ
ಕೋರ್ಸ್ ಮುಗಿದ ಕೆಲವೇ ದಿನಗಳಲ್ಲಿ ವಿಶ್ವದ ಆರ್ಥಿಕ ರಾಜಧಾನಿ ಎನಿಸಿಕೊಂಡಿರುವ ಮ್ಯಾನ್ಹ್ಯಾಟನ್ನಲ್ಲಿ ‘ಫೈನಾನ್ಷಿಯಲ್ ಅನಾಲಿಸ್ಟ್’ ಆಗಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತಮ್ಮ 22ನೇ ಹುಟ್ಟುಹಬ್ಬಕ್ಕೂ ಕೆಲವೇ ದಿನಗಳ ಮುಂಚಿತವಾಗಿ ಈ ಹುದ್ದೆಗೆ ಸೇರಿಕೊಂಡಿದ್ದು, ಇಂತಹ ಪ್ರಸಿದ್ಧ ನಗರದಲ್ಲಿ ವೃತ್ತಿಜೀವನ ಆರಂಭಿಸಿದ್ದು ತಮ್ಮ ಪಾಲಿನ ಅತಿದೊಡ್ಡ ಕನಸು ನನಸಾದ ಕ್ಷಣ ಎಂದು ಅವರು ಹಂಚಿಕೊಂಡಿದ್ದಾರೆ.
6 ತಿಂಗಳಲ್ಲಿ ₹45 ಲಕ್ಷ ಶಿಕ್ಷಣ ಸಾಲ ಮರುಪಾವತಿ
ಈ ಪಯಣದಲ್ಲಿ ನೆಟ್ಟಿಗರನ್ನು ಅತ್ಯಂತ ಹೆಚ್ಛು ಆಶ್ಚರ್ಯಚಕಿತರನ್ನಾಗಿ ಮಾಡಿದ್ದು ಅವರ ಆರ್ಥಿಕ ನಿರ್ವಹಣೆ. ಕೆಲಸಕ್ಕೆ ಸೇರಿದ ಕೇವಲ ಆರು ತಿಂಗಳ ಅವಧಿಯಲ್ಲಿಯೇ ₹45 ಲಕ್ಷದ ಬೃಹತ್ ಶಿಕ್ಷಣ ಸಾಲವನ್ನು ಸಂಪೂರ್ಣವಾಗಿ ತೀರಿಸಿ ಸೈ ಎನಿಸಿಕೊಂಡಿದ್ದಾರೆ. ವಿದೇಶಿ ಶಿಕ್ಷಣಕ್ಕೆ ಮಾಡಿದ ದೊಡ್ಡ ಮೊತ್ತದ ಸಾಲವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಲಿಯರ್ ಮಾಡಿರುವುದು ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಸ್ವಂತ ಗಳಿಕೆಯಲ್ಲಿ 10 ದೇಶಗಳ ಪ್ರವಾಸ
ಸಾಲ ಮರುಪಾವತಿ ಮಾಡುವುದರ ಜೊತೆಗೆ, ಯುವತಿ ತಮ್ಮ ಸ್ವಂತ ಗಳಿಕೆಯ ಹಣದಿಂದಲೇ 10 ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. 20ರ ದಶಕದ ಆರಂಭದಲ್ಲೇ ಹಣಕಾಸಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಪ್ರಪಂಚ ಪರ್ಯಟನೆ ನಡೆಸಿದ ಅನುಭವವನ್ನು ಪಡೆದುಕೊಂಡಿದ್ದಾರೆ.
ನಾಲ್ಕು ವರ್ಷಗಳ ಬಳಿಕ ತಾಯ್ನಾಡಿಗೆ ವಾಪಸ್
ಅಮೆರಿಕದಲ್ಲಿ ನಾಲ್ಕು ವರ್ಷಗಳ ಕಾಲ ವ್ಯಾಸಂಗ, ವೃತ್ತಿ ಅನುಭವ ಹಾಗೂ ಮ್ಯಾನ್ಹ್ಯಾಟನ್ ಜೀವನಶೈಲಿಯನ್ನು ಆನಂದಿಸಿದ ಬಳಿಕ ಇದೀಗ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರೆ. 20ನೇ ವಯಸ್ಸಿಗೆ ತಾಯ್ನಾಡು ತೊರೆದು, 24ನೇ ವಯಸ್ಸಿಗೆ ವೃತ್ತಿ ಹಾಗೂ ಆರ್ಥಿಕ ರಂಗದಲ್ಲಿ ಸ್ವಾವಲಂಬನೆ ಸಾಧಿಸಿ ಹಿಂತಿರುಗುತ್ತಿರುವ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ವಿದೇಶಕ್ಕೆ ತೆರಳಿ ಓದುವ ಯುವಜನತೆಗೆ ಶಿಕ್ಷಣ ಸಾಲವು ಆರಂಭದಲ್ಲಿ ದೊಡ್ಡ ಹೊರೆಯಾಗಿ ಕಂಡರೂ, ಸರಿಯಾದ ಯೋಜನೆ ಮತ್ತು ಹಣಕಾಸಿನ ಶಿಸ್ತಿದ್ದರೆ ಅತ್ಯಂತ ಸುಲಭವಾಗಿ ಸಾಧನೆ ಮಾಡಬಹುದು ಎಂಬುದಕ್ಕೆ ಈ ಯುವತಿಯ ಕಥೆ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

