KRGRV
Friday, August 21, 2026
Homeಜಿಲ್ಲಾ ಸುದ್ದಿಗಳುಲಿಂಗಸಗೂರಿನಲ್ಲಿ ನ್ಯಾಯಕ್ಕಾಗಿ ಹೋರಾಟ: ಎರಡು ಮಕ್ಕಳೊಂದಿಗೆ ಅಂಗಡಿ ಮುಂದೆ ಧರಣಿ ಕುಳಿತ ಮಹಿಳೆ

ಲಿಂಗಸಗೂರಿನಲ್ಲಿ ನ್ಯಾಯಕ್ಕಾಗಿ ಹೋರಾಟ: ಎರಡು ಮಕ್ಕಳೊಂದಿಗೆ ಅಂಗಡಿ ಮುಂದೆ ಧರಣಿ ಕುಳಿತ ಮಹಿಳೆ

ಲಿಂಗಸಗೂರು: ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಬಳಿಕ ಪತಿ ಕೈಕೊಟ್ಟಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಪಟ್ಟಣದ ಮುಖ್ಯ ಬಜಾರ್‌ನಲ್ಲಿರುವ ಹಾರ್ಡ್‌ವೇರ್ ಅಂಗಡಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪಟ್ಟಣದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವಾಗ ತನಗೆ ಪಕ್ಕದ ಅಂಗಡಿಯ ಯುವಕನ ಪರಿಚಯವಾಗಿತ್ತು ಎಂದು ಯುವತಿ ತಿಳಿಸಿದ್ದಾರೆ. ನಂತರ ಅಮರೇಶ್ವರ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದೆ ಎಂದು ಯುವತಿ ಹೇಳಿಕೊಂಡಿದ್ದಾರೆ.

ಮದುವೆ ನಂತರ ಹೆರಿಗೆಗಾಗಿ ಮಹಾರಾಷ್ಟ್ರಕ್ಕೆ ಕರೆದೊಯ್ಯಲಾಗಿತ್ತು. ಎರಡನೇ ಹೆರಿಗೆ ಸಮಯದಲ್ಲಿ ತನ್ನನ್ನು ನಿರಾಕರಿಸಲಾಗಿದೆ ಮತ್ತು ಯುವಕನಿಗೆ ಬೇರೆಡೆ ಮದುವೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಯುವತಿ ಆರೋಪಿಸಿದ್ದಾರೆ.

ತಂದೆಯ ಮನೆಗೆ ಹೋದರೂ ಆಶ್ರಯ ಸಿಗಲಿಲ್ಲ. ಕೆಲ ದಿನಗಳಿಂದ ಸಂಬಂಧಿಕರ ಮನೆಯಲ್ಲಿ ಇದ್ದೇನೆ. ಮಕ್ಕಳು ಶಾಲೆಗೆ ಹೋಗುವ ವಯಸ್ಸಿಗೆ ಬಂದಿದ್ದಾರೆ, ಅವರ ಶಿಕ್ಷಣ ಮತ್ತು ಜೀವನ ನಿರ್ವಹಣೆ ಕಷ್ಟವಾಗಿದೆ, ನನಗೆ ನ್ಯಾಯ ಬೇಕು ಎಂದು ಯುವತಿ ಪಟ್ಟು ಹಿಡಿದು ಕುಳಿತಿದ್ದರು.

ಪೊಲೀಸರ ಮನವೊಲಿಕೆ ಯತ್ನ:
ವಿಷಯ ತಿಳಿದು ಸ್ಥಳಕ್ಕೆ ಬಂದ ಲಿಂಗಸಗೂರು ಪೊಲೀಸರು ಯುವತಿಗೆ ಮನವೊಲಿಸುವ ಯತ್ನ ಮಾಡಿದ್ದಾರೆ. ರಾತ್ರಿ ಸಮಯದಲ್ಲಿ ಅಂಗಡಿ ಮುಂದೆ ಮಕ್ಕಳೊಂದಿಗೆ ಕುಳಿತುಕೊಳ್ಳುವುದು ಸುರಕ್ಷಿತವಲ್ಲ, ನ್ಯಾಯ ಬೇಕಿದ್ದರೆ ಠಾಣೆಗೆ ದೂರು ನೀಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿ ಹೇಳಿದ್ದಾರೆ. ಆದರೂ ಯುವತಿ ನ್ಯಾಯಕ್ಕಾಗಿ ಅಂಗಡಿ ಮುಂದೆಯೇ ಕುಳಿತಿದ್ದರು.

ಈ ಸಂಬಂಧ ಇನ್ನೂ ಅಧಿಕೃತ ದೂರು ದಾಖಲಾಗಿಲ್ಲ. ಪೊಲೀಸರು ಎರಡೂ ಕಡೆಯವರ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಹೆಚ್ಚಿನ ಸುದ್ದಿ