KRGRV
Tuesday, September 22, 2026
Homeರಾಜ್ಯವಚನಗಳ ಮೂಲಕ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸವಾಗಬೇಕು: ಸಚಿವ ಶಿವರಾಜ್ ತಂಗಡಗಿ

ವಚನಗಳ ಮೂಲಕ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸವಾಗಬೇಕು: ಸಚಿವ ಶಿವರಾಜ್ ತಂಗಡಗಿ

ಮೈಸೂರು: ಸೆ.16 : ವಚನವೆಂದರೆ ಕೇವಲ ಸಾಹಿತ್ಯವಲ್ಲ. ಅದು ಬದುಕಿನ ಸತ್ಯ, ಸಮಾನತೆಯ ಧ್ವನಿ ಹಾಗೂ ಸಾಮಾಜಿಕ ಪರಿವರ್ತನೆಯ ಘೋಷಣೆಯಾಗಿದೆ. ವಚನಗಳಲ್ಲಿರುವ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಮೂಲಕ ಅವರನ್ನು ಜಾಗೃತಗೊಳಿಸುವ ಕೆಲಸವಾಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್. ತಂಗಡಗಿ ಹೇಳಿದರು.

ಸುತ್ತೂರು ಮಠದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುತ್ತೂರು ಮಹಾಸಂಸ್ಥಾನದ ವತಿಯಿಂದ, ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ವಚನ ಸಂಗೀತ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಮಾಜದ ಮುಂದೆ ಇಟ್ಟ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಜಾತಿ, ವರ್ಗ, ಲಿಂಗದ ಭೇದಗಳನ್ನು ಮೀರಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದ ಬಸವಣ್ಣನವರು, ‘ಕಾಯಕವೇ ಕೈಲಾಸ’ ಎನ್ನುವ ಮೂಲಕ ದುಡಿಮೆಗೆ ಗೌರವದ ಸ್ಥಾನ ನೀಡಿದರು. ದಾಸೋಹದ ಮೂಲಕ ತಾವು ಗಳಿಸಿದ್ದನ್ನು ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿದರು ಎಂದರು.

ಮಠಗಳ‌‌ ಕೊಡುಗೆ ಅಪಾರ; ಇಂದು ರಾಜ್ಯದಲ್ಲಿ ಕಾಣುತ್ತಿರುವ ದಾಸೋಹದ ಪರಂಪರೆಯ ಹಿಂದೆ ಮಠ-ಮಾನ್ಯಗಳ ಮಹತ್ವದ ಕೊಡುಗೆಯಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನ, ಆಶ್ರಯ ಮತ್ತು ಜ್ಞಾನ ದೊರೆಯಬೇಕು ಎಂಬ ಮಾನವೀಯ ಆಶಯವನ್ನು ಮಠಗಳು ನಿರಂತರವಾಗಿ ಮುನ್ನಡೆಸಿಕೊಂಡು ಬಂದಿವೆ ಎಂದು ಸಚಿವರು ಶ್ಲಾಘಿಸಿದರು.

ಬಸವಣ್ಣನ ವಿಚಾರಗಳು ಕೇವಲ ಭಾಷಣಕ್ಕೆ ಸೀಮಿತವಾಗಬಾರದು
ಬಸವಣ್ಣನವರ ಅನುಭವ ಮಂಟಪ ಕೇವಲ ಸಭೆಯಾಗಿರಲಿಲ್ಲ. ಅದು ವಿಚಾರ ಸ್ವಾತಂತ್ರ್ಯ, ಸಂವಾದ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಅಪೂರ್ವ ವೇದಿಕೆಯಾಗಿತ್ತು. ಬಸವಣ್ಣನವರ ಜೊತೆಗೆ ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ, ಹರಳಯ್ಯ ಸೇರಿದಂತೆ ನೂರಾರು ಶರಣರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಹೊಸ ದಿಕ್ಕು ತೋರಿದರು.
ಬಸವಣ್ಣನವರ ಬಗ್ಗೆ ಮಾತನಾಡುವುದು ಮಾತ್ರವಲ್ಲ, ಅವರ ವಿಚಾರಗಳನ್ನು ಆಡಳಿತ ಮತ್ತು ಸಾರ್ವಜನಿಕ ಬದುಕಿನಲ್ಲಿ ಅಳವಡಿಸಿಕೊಳ್ಳುವ ಬದ್ಧತೆ ಅಗತ್ಯ. ಹಿಂದೆ ಅನೇಕ ಮುಖ್ಯಮಂತ್ರಿಗಳು ಬಸವಣ್ಣನವರ ವಿಚಾರಗಳ ಬಗ್ಗೆ ಭಾಷಣ ಮಾಡುತ್ತಿದ್ದರು. ಆದರೆ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ‌ ಎಂದು ಘೋಷಣೆ ಮಾಡಿದ್ದು ನಮ್ಮ ಸರ್ಕಾರ ಎಂದರು.‌

ತಂಗಡಗಿಯಲ್ಲಿ ಹುಟ್ಟಿದ್ದು ನನ್ನ ಪುಣ್ಯ; ಬಸವಣ್ಣನವರ ಪತ್ನಿ ನೀಲಾಂಬಿಕೆ ಅವರ ತವರೂರು ತಂಗಡಗಿ. ಅದೇ ತಂಗಡಗಿ ಊರಿನವನಾಗಿ ನಾನು ಹುಟ್ಟಿರುವುದು ನನ್ನ ಪುಣ್ಯ. ಬಸವಣ್ಣನವರ ವಿಚಾರಧಾರೆಗೆ ಸಂಬಂಧಿಸಿದ ಕೆಲಸ ಮಾಡುವ ಅವಕಾಶ ದೊರೆತಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇನ್ನು ವಚನ ಪಿತಾಮಹ ಫ.ಗು. ಹಳಕಟ್ಟಿ ಸ್ಮರಣೆ
ವಚನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಿ, ಪರಿಚಯಿಸಿದ ಮಹನೀಯರನ್ನು ಸ್ಮರಿಸಬೇಕು. ಅದರಲ್ಲೂ ಫ.ಗು.ಹಳಕಟ್ಟಿಯವರ ಕೊಡುಗೆ ಅಪಾರ. ಚದುರಿಹೋಗಿದ್ದ ವಚನಗಳನ್ನು ಹುಡುಕಿ, ಸಂಗ್ರಹಿಸಿ, ಪ್ರಕಟಿಸಿ ಕನ್ನಡಿಗರ ಮನೆ-ಮನಗಳಿಗೆ ತಲುಪಿಸುವಲ್ಲಿ ಅವರು ತಮ್ಮ ಜೀವನವನ್ನೇ ಸಮರ್ಪಿಸಿದರು. ಹೀಗಾಗಿ ಅವರನ್ನು ಗೌರವದಿಂದ ‘ವಚನ ಪಿತಾಮಹ’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.

ಇಂದು ನಾವು ಬಸವಣ್ಣನವರ ವಚನಗಳನ್ನು ಓದುತ್ತಿದ್ದೇವೆ, ಕೇಳುತ್ತಿದ್ದೇವೆ ಮತ್ತು ಹಾಡುತ್ತಿದ್ದೇವೆ ಎಂದರೆ ಅದರ ಹಿಂದೆ ಹಳಕಟ್ಟಿಯವರಂತಹ ಮಹನೀಯರ ಪರಿಶ್ರಮವಿದೆ. ಇಂತಹ ಮಹನೀಯರ ಕೊಡುಗೆಯನ್ನು ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮ ಕರ್ತವ್ಯ ಎಂದರು.

ವಚನಗಳಿಗೆ ಸಂಗೀತದ ಸ್ಪರ್ಶ
ವಚನ ಸಾಹಿತ್ಯಕ್ಕೆ ಸಂಗೀತದ ಸ್ಪರ್ಶ ದೊರೆತಾಗ ಅದರ ಸಂದೇಶ ಇನ್ನಷ್ಟು ಪರಿಣಾಮಕಾರಿಯಾಗಿ ಜನಮನವನ್ನು ತಲುಪುತ್ತದೆ. ಇಂದಿನ ಯುವ ಪೀಳಿಗೆಗೆ ವಚನಗಳನ್ನು ಕೇವಲ ಇತಿಹಾಸದ ಪುಟಗಳಲ್ಲಿ ಪರಿಚಯಿಸುವ ಬದಲು ಸಂಗೀತ, ಕಲೆ ಹಾಗೂ ಆಧುನಿಕ ಮಾಧ್ಯಮಗಳ ಮೂಲಕ ಅವರ ಬದುಕಿನ ಭಾಗವಾಗಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ವಚನದಿಂದ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸವಾಗಲಿ;
ವಚನಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಮತ್ತು ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ವಚನ ಸಂಗೀತ ಉತ್ಸವ
ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ವಚನ ಸಂಗೀತ ಉತ್ಸವ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಮಠ-ಮಾನ್ಯಗಳ ಸಹಕಾರದೊಂದಿಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ವಚನ ಪರಂಪರೆಯನ್ನು ಜನಸಾಮಾನ್ಯರು ಹಾಗೂ ಯುವಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಶಿವರಾಜ್. ಎಸ್. ತಂಗಡಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಶ್ರೀವತ್ಸ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಇಲಾಖೆ ಕಾರ್ಯದರ್ಶಿ ಎನ್.ಮಂಜುಶ್ರೀ, ನಿರ್ದೇಶಕಿ ಕೆ.ಎಂ.ವಸುಂಧರ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ