ಯಾದಗಿರಿ, ಸೆಪ್ಟೆಂಬರ್ 28: ಯಾದಗಿರಿ ನಗರದ ನಗರಸಭೆ ವ್ಯಾಪ್ತಿಯ ಸಾರ್ವಜನಿಕ ಶೌಚಾಲಯಗಳಲ್ಲಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಕರವೇ ಸ್ವಾಭಿಮಾನಿ ಬಣದ ಯಾದಗಿರಿ ಜಿಲ್ಲಾ ಘಟಕ ಆರೋಪಿಸಿದೆ.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಬೀರೇಶ ಚಿರತೆನೋರ ಮಾತನಾಡಿ, ಸರ್ಕಾರದ ನಿಯಮದ ಪ್ರಕಾರ ಪುರುಷರಿಗೆ ಮೂತ್ರವಿಸರ್ಜನೆ ಉಚಿತವಾಗಿದ್ದು, ಮಲವಿಸರ್ಜನೆಗೆ ₹3 ಮಾತ್ರ ನಿಗದಿಪಡಿಸಲಾಗಿದೆ. ಆದರೆ ನಗರದ ಕೆಲವು ಸಾರ್ವಜನಿಕ ಶೌಚಾಲಯಗಳಲ್ಲಿ ₹8 ರಿಂದ ₹10ರವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.
ಯಾದಗಿರಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರಿಗೆ ಉಚಿತ ಸೌಲಭ್ಯ ಇರಬೇಕಾದರೂ, ಪ್ರತಿ ಬಾರಿ ₹10 ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಸಾರ್ವಜನಿಕರಿಗೆ ಗೋಚರಿಸುವಂತೆ ಸರ್ಕಾರ ನಿಗದಿಪಡಿಸಿರುವ ದರಪಟ್ಟಿ ಫಲಕಗಳನ್ನು ಅಳವಡಿಸದೇ ಇರುವುದು ನಿಯಮ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು.
ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಹೊತ್ತಿರುವ ಗುತ್ತಿಗೆದಾರರು ಹಾಗೂ ಸಿಬ್ಬಂದಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಕುರಿತು ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರಸ್ತುತ ಗುತ್ತಿಗೆದಾರರ ಕಾರ್ಯವೈಖರಿಯನ್ನು ಪರಿಶೀಲಿಸಿ, ಅಕ್ರಮಗಳು ಕಂಡುಬಂದಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂದು ಬೀರೇಶ ಚಿರತೆನೋರ ಆಗ್ರಹಿಸಿದರು.
ಈ ಕುರಿತು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕರವೇ ಸ್ವಾಭಿಮಾನಿ ಬಣದ ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

