KRGRV
Saturday, October 3, 2026
Homeಜಿಲ್ಲಾ ಸುದ್ದಿಗಳುಖಬರಸ್ತಾನ ಮುಖ್ಯದ್ವಾರದ ಚರಂಡಿ ದುರಸ್ತಿಗೆ ಆಗ್ರಹ

ಖಬರಸ್ತಾನ ಮುಖ್ಯದ್ವಾರದ ಚರಂಡಿ ದುರಸ್ತಿಗೆ ಆಗ್ರಹ

ಬಸವನ ಬಾಗೇವಾಡಿ: ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ರುದ್ರಭೂಮಿ (ಖಬರಸ್ತಾನ) ಮುಖ್ಯ ದ್ವಾರದ ಬಳಿ ಹಾಳಾಗಿರುವ ಚರಂಡಿಯನ್ನು ತಕ್ಷಣ ದುರಸ್ತಿ ಮಾಡಿ, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಟಿಪ್ಪು ಭೀಮ್ ಆರ್ಮಿ ಸಂಘಟನೆ ಪುರಸಭೆ ಕಚೇರಿಯ ವ್ಯವಸ್ಥಾಪಕರಾದ ಶ್ರೀ ಸುರೇಶ್ ಬಾಗೇವಾಡಿ ಅವರಿಗೆ ಮನವಿ ಸಲ್ಲಿಸಿದರು.

ಖಬರಸ್ತಾನದ ಮುಖ್ಯ ದ್ವಾರದ ಬಳಿ ಇರುವ ಚರಂಡಿ ಒಡೆದು ಹಾಳಾಗಿರುವುದರಿಂದ ಅಂತ್ಯಕ್ರಿಯೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಖಬರಸ್ತಾನಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಚರಂಡಿಯಲ್ಲಿ ಸಾರ್ವಜನಿಕರು ಬಿದ್ದು ಗಾಯಗೊಳ್ಳುವ ಸಾಧ್ಯತೆ ಇದ್ದು, ಈಗಾಗಲೇ ಕೆಲವರು ಬಿದ್ದು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಮುಂದೆ ಯಾವುದೇ ಅನಾಹುತ ಸಂಭವಿಸದಂತೆ ಚರಂಡಿಯನ್ನು ಕೂಡಲೇ ದುರಸ್ತಿ ಮಾಡಬೇಕು. ಜೊತೆಗೆ ಖಬರಸ್ತಾನದ ಒಳಗೆ ಸಾರ್ವಜನಿಕರು ಸುಗಮವಾಗಿ ಹೋಗಿ ಬರಲು ಚರಂಡಿ ಮೇಲೆ ಸಣ್ಣ ಸೇತುವೆ ಅಥವಾ ಸೂಕ್ತ ವ್ಯವಸ್ಥೆ ನಿರ್ಮಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಕುರಿತು ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿ, ಮೌಖಿಕವಾಗಿಯೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆರೋಪಿಸಿದೆ. ಈಗಲಾದರೂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದೇ ಸಂದರ್ಭದಲ್ಲಿ ಟಿಪ್ಪು ಭೀಮ್ ಆರ್ಮಿ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಖಾಜಂಬರ ನದಾಫ, ಆಬಿದ್ ನಾ ತಾಂಬೋಲಿ, ಹೈದರ್ ಮಕಾನದಾರ, ಮೈಬುಬ ಬಾಗವಾನ, ಆಶೀಫ್ ಪಟೇಲ್, ಅಬುಶಮಾ ಖೇಡಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ಸಿದ್ದು ಜಮ್ಮಲದಿನ್ನಿ, ವಿಜಯಪುರ

ಹೆಚ್ಚಿನ ಸುದ್ದಿ