ಅ.11ರಂದು ಚಾಮುಂಡಿಬೆಟ್ಟದಲ್ಲಿ ಅದ್ಧೂರಿ ಚಾಲನೆ
ಮುದ್ದೇಬಿಹಾಳ:.ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ–2026ರ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದು ಕೋರಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಶ್ರೀಗಳಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಕರ್ನಾಟಕದ ನಾಡಹಬ್ಬ ಮೈಸೂರು ದಸರಾವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಅಕ್ಟೋಬರ್ 11ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಪದ ವೈಭವವನ್ನು ಸಾರುವ ಈ ಉತ್ಸವದಲ್ಲಿ ಶ್ರೀಗಳು ಪಾಲ್ಗೊಳ್ಳಬೇಕೆಂಬುದು ಮುಖ್ಯಮಂತ್ರಿ ಅವರ ಆಶಯವಾಗಿದೆ ಎಂದು ಆಹ್ವಾನ ಪತ್ರದಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 11ರ ಭಾನುವಾರ ಬೆಳಿಗ್ಗೆ 11.50ಕ್ಕೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಅಗ್ರಪೂಜೆ ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಕೊಪ್ಪಳದ ಶ್ರೀ ಗವಿಮಠದ ಪೀಠಾಧಿಪತಿಗಳಾದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟನಾ ಸಮಾರಂಭವನ್ನು ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮೈಸೂರು ದಸರಾ ಉತ್ಸವದಲ್ಲಿ ಶ್ರೀಗಳು ಪಾಲ್ಗೊಂಡು ಕಾರ್ಯಕ್ರಮದ ಗೌರವ ಹೆಚ್ಚಿಸಬೇಕೆಂದು ಸಚಿವ ಶಿವರಾಜ ಎಸ್. ತಂಗಡಗಿ ಅವರು ಪತ್ರದ ಮೂಲಕ ಗೌರವಪೂರ್ವಕವಾಗಿ ಆಹ್ವಾನಿಸಿದ್ದಾರೆ.

