ಚನ್ನಮ್ಮನ ಕಿತ್ತೂರು: ಹಣ ಮತ್ತು ಆಸ್ತಿ ಸಂಪಾದಿಸುವುದಷ್ಟೇ ನಿಜವಾದ ಶ್ರೀಮಂತಿಕೆಯಲ್ಲ. ಜ್ಞಾನವನ್ನು ಪಡೆದು, ಇರುವುದರಲ್ಲಿ ತೃಪ್ತಿ ಕಂಡುಕೊಂಡು, ಇತರರ ಸಂತೋಷದಲ್ಲಿ ಸಂತೋಷಪಡುವುದೇ ನಿಜವಾದ ಶ್ರೀಮಂತಿಕೆ ಎಂದು ಬಾಲಗಾಂವ್ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಅಮೃತಾನಂದ ಸ್ವಾಮೀಜಿ ಹೇಳಿದರು.
ಚೆನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಹೊಳಿಹೊಸೂರು ರಸ್ತೆಯಲ್ಲಿರುವ ಅನುಭವ ಮಂಟಪ ಮಂಗಳ ಕಾರ್ಯಾಲಯದಲ್ಲಿ ಬುಧವಾರ (ಅ. 28) ನಡೆದ ಆಧ್ಯಾತ್ಮಿಕ ಪ್ರವಚನದಲ್ಲಿ ಅವರು ಮಾತನಾಡಿದರು.
ಸಂತರ ಮತ್ತು ಶರಣರ ಬೋಧನೆಗಳು ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಸತ್ಸಂಗವು ಮನುಷ್ಯನ ಅಜ್ಞಾನವನ್ನು ದೂರಮಾಡಿ, ವಿವೇಕ, ಮನಃಶಾಂತಿ ಹಾಗೂ ಆನಂದದಿಂದ ಬದುಕುವ ಕಲೆಯನ್ನು ಕಲಿಸುತ್ತದೆ. ಭೌತಿಕ ಸಂಪತ್ತಿಗಿಂತ ಜ್ಞಾನವೇ ಶ್ರೇಷ್ಠ ಸಂಪತ್ತು. ನಮ್ಮ ಬಳಿಯಿರುವ ಸಂಪತ್ತನ್ನು ಸದುಪಯೋಗಪಡಿಸಿಕೊಂಡು ಬದುಕಿನ ಸೌಂದರ್ಯವನ್ನು ಆಸ್ವಾದಿಸಬೇಕು ಎಂದು ತಿಳಿಸಿದರು.
ನಿಸರ್ಗದೊಂದಿಗೆ ಬೆರೆಯುವುದು, ಕಷ್ಟಗಳನ್ನು ಧೈರ್ಯದಿಂದ ಎದುರಿಸುವುದು, ಇತರರ ಏಳಿಗೆಯನ್ನು ಕಂಡು ಅಸೂಯೆಪಡುವ ಬದಲು ಸಂತೋಷಪಡುವುದು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಮುಖ ಗುಣಗಳಾಗಿವೆ. ಅಸೂಯೆ ಮತ್ತು ದ್ವೇಷ ಮನುಷ್ಯನ ಮನಃಶಾಂತಿಯನ್ನು ಹಾಳುಮಾಡುತ್ತವೆ. ಪ್ರೀತಿ, ಸಹನೆ, ವಿವೇಕ ಮತ್ತು ಕೃತಜ್ಞತೆಯ ಮನೋಭಾವದಿಂದ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಬಸವಣ್ಣನವರು ಮತ್ತು ಶರಣರು ಸಾರಿದ ತತ್ವಗಳನ್ನು ಸ್ಮರಿಸಿದ ಸ್ವಾಮೀಜಿ, ನೀರು, ಅನ್ನ ಮತ್ತು ಸುಭಾಷಿತಗಳು ಭೂಮಿಯ ಮೇಲಿನ ನಿಜವಾದ ಮೂರು ರತ್ನಗಳು ಎಂಬ ಸುಭಾಷಿತದ ಮಹತ್ವವನ್ನು ವಿವರಿಸಿದರು. ನೀರು ಮತ್ತು ಅನ್ನ ದೇಹವನ್ನು ಪೋಷಿಸಿದರೆ, ಸುಭಾಷಿತಗಳು ಮನಸ್ಸು ಮತ್ತು ಬುದ್ಧಿಯನ್ನು ಪೋಷಿಸುತ್ತವೆ. ಆದ್ದರಿಂದ ಸಂತರು ಮತ್ತು ಶರಣರ ವಚನಗಳನ್ನು ಕೇಳುವುದಷ್ಟೇ ಅಲ್ಲದೆ, ಅವುಗಳ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇತರರ ಬಗ್ಗೆ ಮಾತನಾಡುವಾಗ ಅದು ಸತ್ಯವೇ, ಒಳ್ಳೆಯದೇ ಮತ್ತು ಪ್ರಯೋಜನಕಾರಿಯೇ ಎಂಬ ಮೂರು ಅಂಶಗಳನ್ನು ಪರಿಶೀಲಿಸಬೇಕು. ಜೀವನದ ಅನಿರೀಕ್ಷಿತ ಸನ್ನಿವೇಶಗಳನ್ನು ಎದುರಿಸಲು ಸಂತರ ಬೋಧನೆಗಳೇ ಮಾರ್ಗದರ್ಶಕವಾಗಬೇಕು. ಸತ್ಸಂಗದಲ್ಲಿ ಭಾಗವಹಿಸುವ ಮೂಲಕ ಜ್ಞಾನ ಸಂಪಾದಿಸಿ, ವಿವೇಕ ಬೆಳೆಸಿಕೊಂಡು ಆನಂದಮಯ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸತ್ಸಂಗದ ಆಯೋಜಕರ ಕಾರ್ಯವನ್ನು ಶ್ಲಾಘಿಸಿದ ಅವರು, ಇಂತಹ ಆಧ್ಯಾತ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಜ್ಞಾನ, ಶಾಂತಿ, ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಪ್ರವಚನದ ನಂತರ ದಾಸೋಹ ಸೇವೆ ಮಾಡಿದ ಫಕೀರಪ್ಪ ಬನ್ನೂರು, ಶಿಕ್ಷಕರು ಹಾಗೂ ಶಂಕರೆಪ್ಪ ತುಮ್ಮರಗುದ್ದಿ ಅವರನ್ನು ಸಮಿತಿಯಿಂದ ಸತ್ಕರಿಸಲಾಯಿತು.

