KRGRV
Tuesday, November 3, 2026
Homeಜಿಲ್ಲಾ ಸುದ್ದಿಗಳುಹಳೆ ಚಮಕೇರಿ ರಸ್ತೆ ಅಭಿವೃದ್ಧಿಗೆ ರಸ್ತೆ ಪಕ್ಕದ ಜಮೀನು ಮಾಲೀಕರ ತಕರಾರು ಅಡ್ಡಿ!

ಹಳೆ ಚಮಕೇರಿ ರಸ್ತೆ ಅಭಿವೃದ್ಧಿಗೆ ರಸ್ತೆ ಪಕ್ಕದ ಜಮೀನು ಮಾಲೀಕರ ತಕರಾರು ಅಡ್ಡಿ!

1.10 ಕೋಟಿ ವೆಚ್ಚದ ಕಾಮಗಾರಿಗೆ ವಿಘ್ನ – ಸಾರ್ವಜನಿಕ ರಸ್ತೆ ಅಗೆದು, ಮುಳ್ಳು ಕಂಟಿ ಹಾಕಿದ ಆರೋಪ; ತಾಲೂಕು ಆಡಳಿತ ಮಧ್ಯಪ್ರವೇಶಕ್ಕೆ ಸಾರ್ವಜನಿಕರ ಆಗ್ರಹ

ಅಥಣಿ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಸುಮಾರು 80 ವರ್ಷಗಳು ಕಳೆದರೂ ಹಳೆ ಚಮಕೇರಿ ರಸ್ತೆಗೆ ಸಮರ್ಪಕ ಅಭಿವೃದ್ಧಿಯ ಭಾಗ್ಯ ದೊರೆತಿರಲಿಲ್ಲ. ಈ ಭಾಗದ ರೈತರು ಹಾಗೂ ಮಂಗಸೂಳಿ ನಗರದ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲರಿಗೂ ಸುಸಜ್ಜಿತ ರಸ್ತೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಹಕಾರ ಸಚಿವ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ₹1 ಕೋಟಿ 10 ಲಕ್ಷ ಅನುದಾನ ಮಂಜೂರು ಮಾಡಿಸಿ, ಭೂಮಿಪೂಜೆ ನೆರವೇರಿಸುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಆದರೆ, ಇದೀಗ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರಸ್ತೆ ಪಕ್ಕದ ಜಮೀನು ಮಾಲೀಕರ ತಕರಾರು ಅಡ್ಡಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಳೆ ಚಮಕೇರಿ ರಸ್ತೆ ಹಳ್ಳದ ಪ್ರದೇಶದಲ್ಲಿ ಹಾದುಹೋಗುತ್ತಿದ್ದು, ರಸ್ತೆ ಪಕ್ಕದ ಜಮೀನು ಮಾಲೀಕರು ರಸ್ತೆ ತಮ್ಮ ಜಮೀನಿನ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಅಡ್ಡಿಪಡಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಾರ್ವಜನಿಕ ರಸ್ತೆ ಅಗೆದು, ರಸ್ತೆಯ ಮೇಲೆ ಮುಳ್ಳು ಕಂಟಿಗಳನ್ನು ಹಾಕಿ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿರುವ ಆರೋಪವೂ ಕೇಳಿಬಂದಿದೆ.

ರಸ್ತೆ ಪಕ್ಕದ ಜಮೀನು ಮಾಲೀಕ ತಮ್ಮ ಹೊಲಕ್ಕೆ ತೆರಳಲು ಪೈಪ್ ಅಳವಡಿಸಿ ರಸ್ತೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ತಕರಾರು ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟಾಗುತ್ತಿದೆ.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಆಡಳಿತ ಅಧಿಕಾರಿ ಎಂ.ಎಂ. ಮಿರ್ಜಿ ಹಾಗೂ ಕಂದಾಯ ನಿರೀಕ್ಷಕ ಸಂತೋಷ್ ಬೈನಾಯಕ್ ಅವರು ಸಂಬಂಧಪಟ್ಟ ಜಮೀನು ಮಾಲೀಕರಿಗೆ ತಿಳಿವಳಿಕೆ ನೀಡಿದ್ದಾರೆ. ಅಗತ್ಯವಿದ್ದರೆ ಕೂಡಲೇ ಸರ್ವೇ ಮಾಡಿಸಿಕೊಳ್ಳಬೇಕು. ವಿನಾಕಾರಣ ತಕರಾರು ಮುಂದುವರಿಸಿದರೆ ಸಮಸ್ಯೆ ಉಂಟಾಗಲಿದ್ದು, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೊಂದೆಡೆ, ಮಂಗಸೂಳಿ ನಗರದ ನಿವಾಸಿಗಳು ನಿವೇಶನಗಳನ್ನು ಖರೀದಿಸಿ ಮನೆ ನಿರ್ಮಾಣ ಹಾಗೂ ವಾಸಕ್ಕಾಗಿ ನೆಲೆಸಿದ್ದರೂ ಸಮರ್ಪಕ ರಸ್ತೆ ಸೌಲಭ್ಯವಿಲ್ಲದೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ತೆರಳಲು ಹಾಗೂ ಸಾರ್ವಜನಿಕರು ದಿನನಿತ್ಯ ಸಂಚರಿಸಲು ಈ ರಸ್ತೆ ಅತ್ಯಂತ ಅವಶ್ಯಕವಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಮಂಜೂರಾದಾಗ ವೈಯಕ್ತಿಕ ತಕರಾರುಗಳಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುವುದು ಸರಿಯಲ್ಲ. ಆದ್ದರಿಂದ ತಾಲೂಕು ಆಡಳಿತ, ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಧಿಕೃತ ಭೂಮಾಪನದ ಮೂಲಕ ರಸ್ತೆ ಗಡಿ ಗುರುತಿಸಬೇಕು. ಸಾರ್ವಜನಿಕ ರಸ್ತೆಯ ಒತ್ತುವರಿ ಅಥವಾ ಅಡ್ಡಿಪಡಿಸುವಿಕೆ ಕಂಡುಬಂದಲ್ಲಿ ಕಾನೂನುಬದ್ಧ ಕ್ರಮ ಕೈಗೊಂಡು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂಬುದು ರೈತರು ಹಾಗೂ ಮಂಗಸೂಳಿ ನಗರದ ನಿವಾಸಿಗಳ ಒತ್ತಾಯವಾಗಿದೆ.

ಹೆಚ್ಚಿನ ಸುದ್ದಿ