KRGRV
Thursday, November 5, 2026
Homeಕ್ರೀಡೆಕಲೆ ಮತ್ತು ಕ್ರೀಡೆಗಳು ಕಲಿಕೆಯ ಅವಿಭಾಜ್ಯ ಅಂಗ: ಡಾ.ದಿಲೀಷ್ ಶಶಿ.

ಕಲೆ ಮತ್ತು ಕ್ರೀಡೆಗಳು ಕಲಿಕೆಯ ಅವಿಭಾಜ್ಯ ಅಂಗ: ಡಾ.ದಿಲೀಷ್ ಶಶಿ.

ಕಾರವಾರ, ನ.04(ಕರ್ನಾಟಕ ವಾರ್ತೆ):- ಕಲಿಕೆ ಎಂದರೆ ಕೇವಲ ತರಗತಿ ಪುಸ್ತಕ ಮತ್ತು ಪರೀಕ್ಷೆಗಳಷ್ಟೇ ಅಲ್ಲ, ಕಲೆ ಮತ್ತು ಕ್ರೀಡೆಗಳು ಕೂಡ ಕಲಿಕೆಯ ಅವಿಭಾಜ್ಯ ಅಂಗವಾಗಿದೆ. ಭಾಷೆ ಅಥವಾ ವಿಜ್ಞಾನಕ್ಕಿಂತ ಮೊದಲೇ ನೃತ್ಯ ಹಾಗೂ ಸಂಗೀತದ ಮೂಲಕ ಮಾನವರು ಭಾವನೆಗಳನ್ನು
ವ್ಯಕ್ತಪಡಿಸುತ್ತಿದ್ದರು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ದಿಲೀಷ್ ಶಶಿ ಹೇಳಿದರು.

ಅವರು ಬುಧವಾರ ಕಾರವಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸ್ತೀ ಶಕ್ತಿ ಭವನದಲ್ಲಿ, ರಾಜ್ಯ ಬಾಲಭವನ ಸೊಸೈಟಿ
ಬೆಂಗಳೂರು, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಪ್ರಸಕ್ತ ಸಾಲಿನ ಮಕ್ಕಳ ದಿನಾಚರಣೆ ಹಾಗೂ ಜಿಲ್ಲಾ
ಮಟ್ಟದ ಕಲಾಶ್ರೀ ಪ್ರಶಸ್ತಿ ಆಯ್ಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತ್ತುತ ದಿನಗಳಲ್ಲಿ ಭಾಷೆ, ವಿಜ್ಞಾನ ಹಾಗೂ ಗಣಿತಕ್ಕೆ ನೀಡುವ ಆದ್ಯತೆಯನ್ನು ಕಲೆ ಮತ್ತು ಕ್ರೀಡೆಗಳಿಗೂ ನೀಡುವುದು ಅಗತ್ಯವಿದೆ.ಕೇವಲ ಬುದ್ಧಿಮತ್ತೆ ಮಾತ್ರವಲ್ಲದೆ, ವ್ಯಕ್ತಿಯಲ್ಲಿ ಭಾವನಾತ್ಮಕ ಬೆಳವಣಿಗೆ ಕೂಡ ಮುಖ್ಯವಾಗಿದ್ದು, ಇದು ಸಾಹಿತ್ಯ ಕಲೆ ಹಾಗೂ ಕ್ರೀಡೆಯಿಂದ ಮಾತ್ರ ಬೆಳೆಯಲು ಸಾಧ್ಯ ಎಂದ ಅವರು ರಾಜ್ಯದ ಯಕ್ಷಗಾನ, ಜಾನಪದ ಹಾಗೂ ಶಾಸ್ತ್ರೀಯ ಕಲೆಗಳ ಪರಿಚಯವನ್ನು ಮಕ್ಕಳು ಕಲಿಯಬೇಕು, ಆಗಲೇ
ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಮಕ್ಕಳ ಉಜ್ವಲ ಭವಿಷ್ಯ ಹಾಗೂ ಬಾಲ್ಯವನ್ನು ಸಂಭ್ರಮಿಸಲು ಮುಂದಿನ ದಿನಗಳಲ್ಲಿ
ಇಲಾಖೆಯಿಂದ ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಮಾತನಾಡಿ, ಸ್ಟರ್ಧೆಯಲ್ಲಿ ಭಾಗವಹಿಸುವ ಎಲ್ಲಾ
ಮಕ್ಕಳಲ್ಲಿ ಪ್ರತಿಭೆ ಇದ್ದು, ಪ್ರಶಸ್ತಿ ದೊರೆಯದಿದ್ದರೂ ಮಕ್ಕಳು ಹಿಂಜರಿಯದೆ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯವಾಗಿದೆ. ಮಕ್ಕಳು ಈ
ರೀತಿಯಲ್ಲಿ ವೇದಿಕೆಯನ್ನು ಅಲಂಕರಿಸುವುದನ್ನು ನೋಡುವುದೇ ಪೋಷಕರಿಗೆ ಸಂತೋಷ ಎಂದರು.

ಬಾಲಭವನ ಸೊಸೈಟಿ ಸದಸ್ಯ ಹಾಗೂ ಯುವಜನ ಉಪ ಸಮನ್ವಯಧಿಕಾರಿ ಕಲ್ಪನಾ ನಾಯ್ಕ ಮಾತನಾಡಿ, ಮಕ್ಕಳ ವಿವಿಧ
ವೇಷಭೂಷಣದ ಪ್ರತಿಭೆಯನ್ನು ಪ್ರದರ್ಶಿಸಲು ಈ ರೀತಿಯ ವೇದಿಕೆಗಳು ಪ್ರೋತ್ಸಾಹಿಸಿ, ಮಕ್ಕಳಲ್ಲಿ ಸೃಜನಾತ್ಮಕತೆ, ಏಕಾಗ್ರತೆ, ಶಿಸ್ತು ಹಾಗೂ
ತಮ್ಮನ್ನು ತಾವು ಭಾಗವಹಿಸುವಂತೆ ಮುನ್ನಡೆಸುತ್ತವೆ. ಪಾಲಕರು ಮತ್ತು ಶಿಕ್ಷಕರು ಕೇವಲ ಅಂಕಗಳ ಮೂಲಕ ಮಕ್ಕಳ ವ್ಯಕ್ತಿತ್ವ ಅಳೆಯದೆ, ಅವರ
ಪ್ರತಿಭೆಗೆ ಸಮಾನವಾದ ಅವಕಾಶ ನೀಡಬೇಕು ಎಂದರು.

ಕಾರ್ಯಕ್ರಮದ ಕುರಿತು ಬಾಲಭವನ ಸೊಸೈಟಿ ಸದಸ್ಯ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯಕ ಹಾಗೂ ಬಾಲಭವನ

ಸೊಸೈಟಿ ಎ.ಡಬ್ಲೂ.ಇ ನಾರಾಯಣ ನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಸ್ಪರ್ಧಾರ್ಥಿಗಳು, ಪಾಲಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

ವರದಿಗಾರರು: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ