ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡೆ ಸ್ನೇಹಲತಾ ಶೆಟ್ಟಿ ಹೇಳಿಕೆ
ವಿಜಯಪುರ: ಮಹಿಳಾ ಸಬಲೀಕರಣವು ದೇಶದ ಸಮಗ್ರ ಪ್ರಗತಿಗೆ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ಉದ್ಯೋಗ ಅವಕಾಶಗಳು ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಮಾನ ಪ್ರಾತಿನಿಧ್ಯ ದೊರೆತಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡೆ ಸ್ನೇಹಲತಾ ಶೆಟ್ಟಿ ಹೇಳಿದ್ದಾರೆ.
ನಮ್ಮ ವಾಹಿನಿ ಜೊತೆ ಮಾತನಾಡಿದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ಕೈಗೊಂಡಿರುವ ವಿವಿಧ ಯೋಜನೆಗಳು ಹಾಗೂ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಗೆ ಸರ್ಕಾರದ ಹಲವು ಯೋಜನೆಗಳು ಸಹಕಾರಿಯಾಗಿವೆ. ವಿಶೇಷವಾಗಿ ‘ಗೃಹಲಕ್ಷ್ಮಿ ಯೋಜನೆ’, ‘ಶಕ್ತಿ ಯೋಜನೆ’, ‘ಕೂಸಿನ ಮನೆಗಳು’ ಸೇರಿದಂತೆ ಹಲವು ಕಾರ್ಯಕ್ರಮಗಳು ಮಹಿಳೆಯರ ಜೀವನದಲ್ಲಿ ಧನಾತ್ಮಕ ಬದಲಾವಣೆ ತರಲು ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಮಹಿಳೆಯರು ಬಲಿಷ್ಠರಾಗಲು ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಪಾತ್ರ ವಹಿಸಲು ಸ್ಥಳೀಯ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸ್ನೇಹಲತಾ ಶೆಟ್ಟಿ ಅಭಿಪ್ರಾಯಪಟ್ಟರು.
ಸಮರ್ಥ ಮಹಿಳಾ ನಾಯಕರಿಗೆ ಅವಕಾಶ ನೀಡಬೇಕು
ರಾಜಕೀಯ ಹಾಗೂ ಆಡಳಿತ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದ ಅವರು, ಅರ್ಹತೆ, ಅನುಭವ ಮತ್ತು ನಾಯಕತ್ವದ ಸಾಮರ್ಥ್ಯ ಹೊಂದಿರುವ ಮಹಿಳಾ ಮುಖಂಡರನ್ನು ಗುರುತಿಸಿ ಪ್ರಮುಖ ಹುದ್ದೆಗಳು, ಆಯೋಗಗಳು ಮತ್ತು ಸಮಿತಿಗಳಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿಯಲ್ಲಿಯೂ ಮಹಿಳಾ ಸಬಲೀಕರಣ, ಸಮಾನತೆ ಮತ್ತು ಪರಿಣಾಮಕಾರಿ ಪ್ರತಿನಿಧಿತ್ವದ ದೃಷ್ಟಿಯಿಂದ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಮರ್ಥ ಮಹಿಳಾ ನಾಯಕರನ್ನು ಗುರುತಿಸಿ ಸೂಕ್ತ ಜವಾಬ್ದಾರಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು ಮಹಿಳಾ ನಾಯಕರ ಆಯ್ಕೆಯಲ್ಲಿ ಅರ್ಹತೆ ಮತ್ತು ಅನುಭವಕ್ಕೆ ಆದ್ಯತೆ ನೀಡಬೇಕು. ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮಹಿಳಾ ಯೋಜನೆಗಳ ಯಶಸ್ಸಿಗೆ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ
ಮಹಿಳೆಯರಿಗಾಗಿ ರೂಪಿಸಿರುವ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು ಮಹಿಳಾ ನಾಯಕಿಯರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದು ಅವರು ಹೇಳಿದರು.
ಬಯಲು ಶೌಚ ಮುಕ್ತ ವಿಜಯಪುರಕ್ಕೆ ಹೆಚ್ಚಿನ ಒತ್ತು ಅಗತ್ಯ
ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇನ್ನೂ ಕೆಲವು ಕಡೆ ಬಯಲು ಶೌಚ ಪದ್ಧತಿ ಮುಂದುವರಿದಿದ್ದು, ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಸ್ನೇಹಲತಾ ಶೆಟ್ಟಿ ಗಮನ ಸೆಳೆದರು.
ಪ್ರತಿ ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮತ್ತು ಅದರ ಬಳಕೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯವರು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸ್ಥಳೀಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.
ಮಹಿಳೆಯರಿಗೆ ಸಮಾನ ಅವಕಾಶ, ನಾಯಕತ್ವದ ಅವಕಾಶ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಸ್ನೇಹಲತಾ ಶೆಟ್ಟಿ ಹೇಳಿದರು.

