KRGRV
Thursday, November 5, 2026
Homeರಾಜ್ಯಚಿಲ್ಲರೆ ಹಣದ ವಿಚಾರಕ್ಕೆ ಬಸ್‌ನಲ್ಲಿ ಗಲಾಟೆ: ಮಹಿಳಾ ಕಂಡಕ್ಟರ್‌ನನ್ನು ಚಲಿಸುವ ಬಸ್‌ನಿಂದ ತಳ್ಳಿದ ಪ್ರಯಾಣಿಕ ಮಹಿಳೆ;...

ಚಿಲ್ಲರೆ ಹಣದ ವಿಚಾರಕ್ಕೆ ಬಸ್‌ನಲ್ಲಿ ಗಲಾಟೆ: ಮಹಿಳಾ ಕಂಡಕ್ಟರ್‌ನನ್ನು ಚಲಿಸುವ ಬಸ್‌ನಿಂದ ತಳ್ಳಿದ ಪ್ರಯಾಣಿಕ ಮಹಿಳೆ; ಚಿಕಿತ್ಸೆ ಫಲಿಸದೆ ಸಾವು!

ತೆಲಂಗಾಣ: ಕೇವಲ ಚಿಲ್ಲರೆ ಹಣದ ವಿಚಾರವಾಗಿ ನಡೆದ ಗಲಾಟೆ ದುರಂತ ಅಂತ್ಯ ಕಂಡಿದೆ. ಪ್ರಯಾಣಿಕ ಮಹಿಳೆಯೊಬ್ಬರು ಚಲಿಸುತ್ತಿದ್ದ ಸರ್ಕಾರಿ ಬಸ್‌ನಿಂದ ಮಹಿಳಾ ಕಂಡಕ್ಟರ್‌ನನ್ನು ಕೆಳಕ್ಕೆ ತಳ್ಳಿದ ಪರಿಣಾಮ, ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಶ್ವಪುರಂ ಮಂಡಲದ ಮಿಟ್ಟಗುಡೆಂ ಗ್ರಾಮದ ಮೌನಿಕಾ ಎಂಬ ಮಹಿಳೆ, ತನ್ನ ಮಗನೊಂದಿಗೆ ಮಣುಗೂರು ಸಮೀಪದಿಂದ ಭದ್ರಾಚಲಂಗೆ ತೆರಳಲು ಸರ್ಕಾರಿ ಬಸ್ ಹತ್ತಿದ್ದರು.

ಈ ವೇಳೆ ಮಗನ ಟಿಕೆಟ್‌ಗಾಗಿ ಮಹಿಳಾ ಕಂಡಕ್ಟರ್ ಪ್ರವಳಿಕಾ ಅವರಿಗೆ ₹100 ಮುಖಬೆಲೆಯ ನೋಟು ನೀಡಿದ್ದರು. ಕಂಡಕ್ಟರ್ ₹10 ಮೌಲ್ಯದ ಟಿಕೆಟ್ ನೀಡಿ, ಉಳಿದ ಹಣದ ಮೊತ್ತವನ್ನು ಟಿಕೆಟ್‌ನ ಹಿಂಭಾಗದಲ್ಲಿ ಬರೆದು ನೀಡಿದ್ದರು ಎನ್ನಲಾಗಿದೆ.

ಆದರೆ, ಉಳಿದ ಚಿಲ್ಲರೆ ಹಣವನ್ನು ತಕ್ಷಣವೇ ನೀಡುವಂತೆ ಮೌನಿಕಾ ಒತ್ತಾಯಿಸಿದ್ದಾರೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿ, ವಾಗ್ವಾದ ತೀವ್ರಗೊಂಡಿದೆ. ಈ ವೇಳೆ ಆಕ್ರೋಶಗೊಂಡ ಮೌನಿಕಾ, ಚಲಿಸುತ್ತಿದ್ದ ಬಸ್‌ನಿಂದ ಕಂಡಕ್ಟರ್ ಪ್ರವಳಿಕಾ ಅವರನ್ನು ಕೆಳಕ್ಕೆ ತಳ್ಳಿದ್ದಾರೆ ಎಂದು ವರದಿಯಾಗಿದೆ.

ರಸ್ತೆಗೆ ಬಿದ್ದ ಪ್ರವಳಿಕಾ ಅವರ ಎರಡೂ ಕಾಲುಗಳ ಮೇಲೆ ಬಸ್‌ನ ಹಿಂಬದಿ ಚಕ್ರಗಳು ಹರಿದ ಪರಿಣಾಮ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪದ ಕುರಿತು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಹೆಚ್ಚಿನ ಸುದ್ದಿ