ಬೆಂಗಳೂರು : August 16: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಂಡಾಯವೆದ್ದು ಕೇಸರಿ ಪಾಳಯ ಸೇರಿದ್ದ ಬಾಂಬೆ ಬಾಯ್ಸ್ ಮತ್ತೆ ಕೈ ಹಿಡಿಯುವ ಸುದ್ದಿ ಹಬ್ಬಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಮಾಲ್ ಮಾಡಿರುವ ಕೈಪಡೆ, ಲೋಕ ಸಮರದಲ್ಲಿ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದೆ. ಇದಕ್ಕಾಗಿ ತೆರೆಮರೆಯಲ್ಲಿ ದೊಡ್ಡ ಮಟ್ಟದ ಕಸರತ್ತು ಆರಂಭಿಸಿದೆ. ಆಪರೇಷನ್ ಹಸ್ತದ ಮೂಲಕ ಬಿಜೆಪಿ-ಜೆಡಿಎಸ್ ನಲ್ಲಿ ಮುನಿಸಿಕೊಂಡಿರುವ ನಾಯಕರನ್ನು ಪಕ್ಷಕ್ಕೆ ಕರೆ ತರುವ ಪ್ಲಾನ್ ಮಾಡಿದೆ ಎನ್ನಲಾಗ್ತಿದೆ. ಕಮಲ ಪಾಳಯದ ಘಟಾನುಘಟಿಗಳಿಗೆ ಈಗಾಗಲೇ ಗಾಳ ಹಾಕಿದೆ ಎಂಬ ಮಾಹಿತಿಯಿದೆ.
ಆಪರೇಷನ್ ಹಸ್ತದ ಭಾಗವಾಗಿ ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಜೆಪಿಯ ಕೆಲ ಮಾಜಿ ಕಾರ್ಪೊರೇಟರ್ ಗಳನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಫಲವಾಗಿದೆ. ಈ ನಡುವೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬಂಡಾಯವೆದ್ದು ಬಿಜೆಪಿ ಸೇರಿರುವ 17 ಶಾಸಕರ ಪೈಕಿ ಕೆಲವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಕೈ ಹಿಡಿಯುತ್ತಾರಾ ಎಸ್ ಟಿಎಸ್ ?: ಬಿಜೆಪಿ ಹೈಕಮಾಂಡ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಕೇಳಿ ಬಂದಿತ್ತು. ಇದೀಗ ಶಾಸಕ ಎಸ್.ಟಿ ಸೋಮಶೇಖರ್ ಕೂಡ ಕಾಂಗ್ರೆಸ್ ನತ್ತ ವಾಲಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಎರಡು ದಿನಗಳ ಹಿಂದೆ ‘ಡಿಕೆಶಿ ನಮ್ಮ ಗುರು’ ಎಂದು ಸೋಮಶೇಖರ್ ಹೇಳಿದ್ದರು. ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಸೇರುವ ಸಂಬಂಧ ಡಿ.ಕೆ ಬ್ರದರ್ಸ್ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆ ಆಗಿದೆಯಂತೆ. ಪಕ್ಷ ಸೇರ್ಪಡೆ, ಮುಂದಿನ ನಡೆ, ಪಕ್ಷಕ್ಕೆ ಬಂದರೆ ಕೊಡುವ ಜವಾಬ್ದಾರಿ ಕುರಿತು ಮಾತುಕತೆ ನಡೆದಿದೆ ಎಂದು ಹೇಳಲಾಗ್ತಿದೆ.
ಬಾಂಬೆ ಬಾಯ್ಸ್ ಮೇಲೆ ಕೈ ಕಣ್ಣು : ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಕರೆ ತರುವಲ್ಲಿ ಸಫಲವಾಗಿದ್ದ ಕಾಂಗ್ರೆಸ್ ನಾಯಕರು, ಮತ್ತಷ್ಟು ಕೇಸರಿ ನಾಯಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ಸಮಯದಲ್ಲಿ ಬಂಡಾಯವೆದ್ದು ಬಿಜೆಪಿ ಸೇರಿದ್ದ 17 ಮಂದಿಯೇ ಕಾಂಗ್ರೆಸ್ ನ ಮೇನ್ ಟಾರ್ಗೆಟ್ ಎನ್ನಲಾಗಿದೆ.
ಆಪರೇಷನ್ ಕಾರ್ಪೊರೇಟರ್ : ರಾಜ್ಯಮಟ್ಟದ ನಾಯಕರನ್ನು ಪಕ್ಷದತ್ತ ಸೆಳೆಯುವುದರ ಜೊತೆ ಜೊತೆಗೆ ಕಾಂಗ್ರೆಸ್ ನಾಯಕರು ಬಿಬಿಎಂಪಿ ಕಾರ್ಪೊರೇಟರ್ ಗಳಿಗೂ ಗಾಳ ಹಾಕಿದ್ದಾರೆ. ಈಗಾಗಲೇ ಆರ್ ಆರ್ ನಗರದ 7 ಬಿಜೆಪಿಯ ಮಾಜಿ ಕಾರ್ಪೊರೇಟರ್ ಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈಗ ಯಶವಂತಪುರ, ಕೆಆರ್ ಪುರಂನ ಬಿಜೆಪಿಯ 17 ಮಾಜಿ ಕಾರ್ಪೊರೇಟರ್ ಗಳು ಕಾಂಗ್ರೆಸ್ ಸೇರ್ಪಡೆಗೆ ಸಿದ್ದರಾಗಿದ್ದಾರೆ. ಇದೇ ತಿಂಗಳ 21 ರಂದು 17 ಮಂದಿ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ ಎನ್ನಲಾಗ್ತಿದೆ. ಈ ಕುರಿತು 3 ದಿನದ ಹಿಂದೆ ಕೈ ನಾಯಕರ ಜೊತೆ ಮಾತುಕತೆ ಆಗಿದೆಯಂತೆ. ಕೆಂಗೇರಿಯಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ಗಳು ಬಿಜೆಪಿ ಸೇರಲಿದು, ಇದೇ ವೇದಿಕೆಯಲ್ಲಿ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.