ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜಾಮೀನು ಕೋರಿ ಸಲ್ಲಿಸಿದ್ದ ಒಂಬತ್ತು ಅರ್ಜಿಗಳನ್ನು ಇಸ್ಲಾಮಾಬಾದ್‌ನ ಸ್ಥಳೀಯ ನ್ಯಾಯಾಲಯಗಳು ತಿರಸ್ಕರಿಸಿವೆ. ಹಿಂಸಾತ್ಮಕ ಪ್ರತಿಭಟನೆ ಆರೋಪದ ಮೇಲೆ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಗಳನ್ನು ರದ್ದುಗೊಳಿಸುವಂತೆ ಇಮ್ರಾನ್ ಖಾನ್ ನ್ಯಾಯಾಲಯಗಳನ್ನು ಕೋರಿದ್ದರು.
ಮಂಗಳವಾರ, ಇಸ್ಲಾಮಾಬಾದ್‌ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ) ಮೂರು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತು. ಏಕಕಾಲದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎಡಿಎಸ್‌ಜೆ) ಮೊಹಮ್ಮದ್ ಸೊಹೈಲ್ ಅವರು ಇಮ್ರಾನ್ ಖಾನ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಆರು ಅರ್ಜಿಗಳನ್ನು ವಜಾಗೊಳಿಸಿದ್ದಾರೆ.

ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್ ವಿರುದ್ಧ ಇಸ್ಲಾಮಾಬಾದ್ ಖನ್ನಾ ಮತ್ತು ಬರ್ಕಾಹು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಇದಲ್ಲದೆ, ಖಾನ್ ವಿರುದ್ಧ ರಾಜಧಾನಿಯ ಕರಾಚಿ ಕಂಪನಿ, ರಾಮ್ನಾ, ಕೊಹ್ಸರ್, ತರ್ನೂಲ್ ಮತ್ತು ಸೆಕ್ರೆಟರಿಯೇಟ್ ಪೊಲೀಸ್ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ.
ಮೇ 9ರಂದು ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆ ಬಳಿಕ ದೇಶದ ವಿವಿದೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯಿತು. PTI ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಹಿಂಸಾತ್ಮಕ ಪ್ರತಿಭಟನೆಗಳ ಮಾಸ್ಟರ್ ಮೈಂಡ್ ಇಮ್ರಾನ್ ಖಾನ್ ಎಂದು ಆರೋಪಿಸಿರುವ ಪೊಲೀಸರು ಎಫ್ ಐಆರ್ ಗಳನ್ನು ದಾಖಲಿಸಿದ್ದಾರೆ.

