KRGRV
Tuesday, November 18, 2025
Homeರಾಜ್ಯದೇವಸ್ಥಾನಗಳಿಗೆ ಅನುದಾನ ತಡೆ : ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ...

ದೇವಸ್ಥಾನಗಳಿಗೆ ಅನುದಾನ ತಡೆ : ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಕಿಡಿ

ಚಿಕ್ಕೋಡಿ : ದೇವಸ್ಥಾನಗಳಿಗೆ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ತಡೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಸರ್ಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವ ಇದೆ. ನಮ್ಮ ಸರ್ಕಾರದಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದೆವು ಎಂದು ತಿಳಿಸಿದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣಕ್ಕೆ ಎರಡನೇ ಕಂತು ಬಿಡುಗಡೆ ಆಗಿರಲಿಲ್ಲ, ಈಗ ಅನುದಾನ ತಡೆ ಹಿಡಿದಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿ ಕಾರಿದ್ದಾರೆ.

ದೇವಸ್ಥಾನದ ವಿಷಯದಲ್ಲಿ ಸರ್ಕಾರ ಯಾವುದೇ ಪಕ್ಷಪಾತ ಮಾಡಬಾರದು. ನಮ್ಮ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಹಣವನ್ನು ಬಿಡುಗಡೆ ಮಾಡುವುದು ಸಚಿವರ ಜವಾಬ್ದಾರಿಯಾಗಿದೆ ಎಂದ ಅವರು ಈ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಗಳ ಜೀರ್ಣೋದ್ಧಾರವಾಗಬೇಕು, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರದ ಆದೇಶದಲ್ಲಿ ಏನಿದೆ…? 

ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ದಾರ ಅನುದಾನಕ್ಕೆ ರಾಜ್ಯ ಸರ್ಕಾರ ತಡೆ ನೀಡಿದ್ದು, ಈ ಸಂಬಂಧ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.

ಮೂರು ವಿಷಯಗಳನ್ನು ಮುಂದಿಟ್ಟು ದೇವಸ್ಥಾನಗಳ ಅಭಿವೃದ್ಧಿ ಅನುದಾನಕ್ಕೆ ಸರ್ಕಾರ ತಡೆ ನೀಡಿದೆ. 1. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಸೂಚನೆಯವರೆಗೂ ಹಣ ಬಿಡುಗಡೆ ಮಾಡಬಾರದು. 2. ಅನುದಾನ ಮಂಜೂರಾಗಿ ಈಗಾಗಲೇ ಶೇ.50ರಷ್ಟು ಹಣ ಬಿಡುಗಡೆ ಆಗಿದ್ದು, ಹಣ ಬಳಕೆ ಆಗದಿದ್ದಲ್ಲಿ ಉಳಿದ ಹಣ ಬಿಡುಗಡೆ ಮಾಡಬಾರದು ಹಾಗೂ ಕಾಮಗಾರಿ ಆರಂಭ ಆಗದಿದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡದಂತೆ ತಡೆಯಬೇಕು. 3. ಆಡಳಿತಾತ್ಮಕ ಮಂಜೂರಾತಿ ಸ್ವೀಕೃತವಾಗಿದ್ದರೆ ಮುಂದಿನ ನಿರ್ದೇಶನದವರೆಗೆ ತಡೆ ಹಿಡಿಯಬೇಕು ಎಂದು ಮುಜರಾಯಿ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಹೆಚ್ಚಿನ ಸುದ್ದಿ