KRGRV
Tuesday, November 18, 2025
Homeದೇಶಕಲಬುರ್ಗಿ, ಪನ್ಸಾರೆ, ದಾಭೋಲ್ಕರ್​, ಗೌರಿ ಹತ್ಯೆ ಪ್ರಕರಣಗಳಲ್ಲಿ 'ಸಾಮಾನ್ಯ ಸಂಬಂಧ'ವಿದೆಯೇ?: ಪರಿಶೀಲಿಸಲು CBIಗೆ ಸುಪ್ರೀಂ ಸೂಚನೆ

ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್​, ಗೌರಿ ಹತ್ಯೆ ಪ್ರಕರಣಗಳಲ್ಲಿ ‘ಸಾಮಾನ್ಯ ಸಂಬಂಧ’ವಿದೆಯೇ?: ಪರಿಶೀಲಿಸಲು CBIಗೆ ಸುಪ್ರೀಂ ಸೂಚನೆ

ನವದೆಹಲಿ: ಕರ್ನಾಟಕದ ಸಾಹಿತಿ ಎಂ.ಎಂ.ಕಲಬುರ್ಗಿ, ಲೇಖಕಿ ಗೌರಿ ಲಂಕೇಶ್​ ಹಾಗೂ ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ್​ ಪನ್ಸಾರೆ, ನರೇಂದ್ರ ದಾಭೋಲ್ಕರ್​ ಹತ್ಯೆಗಳ ನಡುವೆ ಪರಸ್ಪರ ಸಾಮಾನ್ಯ ಸಂಬಂಧವಿದೆಯೇ ಎಂಬುದರ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಇಂದು​ (ಶುಕ್ರವಾರ) ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಸೂಚಿಸಿತು.

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡಲು ಇದೇ ಏಪ್ರಿಲ್​ 18ರಂದು ಬಾಂಬೆ ಹೈಕೋರ್ಟ್​ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ. ಇವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಮುಕ್ತಾ ದಾಭೋಲ್ಕರ್ ಪರವಾಗಿ ಹಿರಿಯ ವಕೀಲ ಆನಂದ್ ಗ್ರೋವರ್ ನ್ಯಾಯಪೀಠದ ಮುಂದೆ ಎರಡು ಪ್ರಮುಖ ವಿಷಯಗಳನ್ನು ಮಂಡಿಸಿದರು.

”ಮೊದಲನೆಯದಾಗಿ, ಸಿಬಿಐ ತನಿಖೆ ಪೂರ್ಣಗೊಳ್ಳುವ ಮುನ್ನವೇ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಎರಡನೆಯದಾಗಿ, ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಪುರಾವೆಗಳು ಸೂಚಿಸುತ್ತವೆ. ಇದನ್ನು ಬಾಂಬೆ ಹೈಕೋರ್ಟ್​ನ ಮುಂದೆ ಕೂಡ ಒತ್ತಿ ಹೇಳಲಾಗಿದೆ” ಎಂದು ನ್ಯಾಯಪೀಠದ ಗಮನಕ್ಕೆ ವಕೀಲ ಆನಂದ್ ಗ್ರೋವರ್​ ತಂದರು.

ಆಗ ನ್ಯಾಯಪೀಠವು, ”ವಿಚಾರಣೆ ನಡೆಯುತ್ತಿರುವುದರಿಂದ ಮತ್ತು ಹಲವಾರು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ವಿಚಾರಣೆ ನಡೆಸುತ್ತಿರುವುದರಿಂದ ತನಿಖೆಯಲ್ಲಿ ಮೇಲ್ವಿಚಾರಣೆ ಮಾಡಲು ಹೈಕೋರ್ಟ್ ನಿರಾಕರಿಸಿದೆ” ಎಂದು ಹೇಳಿತು. ಇದಕ್ಕೆ ಪ್ರತಿಯಾಗಿ ವಕೀಲ ಗ್ರೋವರ್​, ”ಇಂತಹ ಮೇಲ್ವಿಚಾರಣೆಯಲ್ಲಿ ತಪ್ಪೇನು?. ಅಲ್ಲದೇ, ಪರಾರಿಯಾಗಿರುವವರನ್ನು ಇದುವರೆಗೂ ಬಂಧಿಸಿಲ್ಲ” ಎಂದು ವಾದ ಮಂಡಿಸಿದರು.

ಮತ್ತೊಂದೆಡೆ, ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ”ಈ ವರ್ಷದ ಮೇನಲ್ಲಿ ಕೌಂಟರ್​ ಅಫಿಡವಿಟ್ ಸಲ್ಲಿಸಲಾಗಿದೆ. ಆದರೂ, ಕೆಲವು ಆಡಳಿತಾತ್ಮಕ ತೊಂದರೆಗಳಿಂದ ಅದನ್ನು ಸ್ವೀಕರಿಸಲಾಗಿಲ್ಲ” ಎಂದು ವಿಚಾರಣೆಯ ಸ್ಥಿತಿ ಬಗ್ಗೆ ಪೀಠಕ್ಕೆ ವಿವರಿಸಿದರು. ಇದೇ ವೇಳೆ, ”ಈ ಹತ್ಯೆಗಳ ಹಿಂದೆ ದೊಡ್ಡ ಪಿತೂರಿ ಇದೆ” ಎಂಬ ಗ್ರೋವರ್ ಹೇಳಿದರು. ಗ್ರೋವರ್​ ಅವರ ಈ ಹೇಳಿಕೆ ಕುರಿತು ನ್ಯಾಯ ಪೀಠವು, ”ನಿಮ್ಮ ಪ್ರಕಾರ, ವಿಚಾರಣೆಯನ್ನು ಆರೋಪಿಗಳು ಎದುರಿಸುತ್ತಿದ್ದಾರೆ. ಈ ನಾಲ್ಕು ಕೊಲೆಗಳಲ್ಲಿ ಯಾವುದೇ ಸಾಮಾನ್ಯ ಎಳೆ ಇಲ್ಲವೇ” ಎಂದು ಸಿಬಿಐ ಪರ ವಕೀಲರಿಗೆ ಪ್ರಶ್ನಿಸಿತು. ಅಲ್ಲದೇ, ”ಇದನ್ನು ನ್ಯಾಯಾಲಯವು ತಿಳಿದುಕೊಳ್ಳಲು ಬಯಸುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿ” ಎಂದು ನ್ಯಾಯಮೂರ್ತಿ ಕೌಲ್ ಅವರು ಐಶ್ವರ್ಯಾ ಭಾಟಿ ಅವರಿಗೆ ​ಸೂಚಿಸಿದರು.

ಮುಂದುವರೆದು, ಈ ವಿಷಯದಲ್ಲಿ ಕೆಲವು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ವಕೀಲ ಗ್ರೋವರ್‌ ಅವರಿಗೆ ಸೂಚಿಸಿದ ನ್ಯಾಯ ಪೀಠವು, ಈ ದಾಖಲೆಗಳು ದೊಡ್ಡ ಪಿತೂರಿಯ ಕುರಿತು ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಅನುಕೂಲವಾಗುತ್ತವೆ ಎಂದು ಹೇಳಿತು. ಇದಕ್ಕಾಗಿ ಗ್ರೋವರ್‌ ಅವರಿಗೆ ಎರಡು ವಾರಗಳ ಕಾಲಾವಕಾಶವನ್ನೂ ನೀಡಿತು. ನರೇಂದ್ರ ದಾಭೋಲ್ಕರ್ ಅವರನ್ನು ಪುಣೆಯಲ್ಲಿ 2013ರ ಆಗಸ್ಟ್​ 20ರಂದು ಬೈಕ್​ ಮೇಲೆ ಬಂದ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದನು. 2015ರ ಫೆಬ್ರವರಿ 20ರಂದು ಗೋವಿಂದ್​ ಪನ್ಸಾರೆ ಅವರನ್ನು ಹತ್ಯೆ ಮಾಡಲಾಗಿತ್ತು. ಧಾರವಾಡದಲ್ಲಿ 2015ರ ಆಗಸ್ಟ್​ 30ರಂದು ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ 2017ರ ಸೆಪ್ಟೆಂಬರ್​ 5ರಂದು ಗೌರಿ ಲಂಕೇಶ್​ ಕೊಲೆಯಾಗಿದ್ದರು.

ಹೆಚ್ಚಿನ ಸುದ್ದಿ