KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಬಿಜೆಪಿ ವರಿಷ್ಠರ ಜತೆ ಮುನಿಸು; ಬಿಎಸ್‌ವೈ ನೇತೃತ್ವದ ಸಭೆಗೆ ಶಾಸಕ ಎಸ್‌ಟಿಎಸ್‌ ಗೈರು!

ಬಿಜೆಪಿ ವರಿಷ್ಠರ ಜತೆ ಮುನಿಸು; ಬಿಎಸ್‌ವೈ ನೇತೃತ್ವದ ಸಭೆಗೆ ಶಾಸಕ ಎಸ್‌ಟಿಎಸ್‌ ಗೈರು!

ಡಿಜಿಟಲ್ ಡೆಸ್ಕ್‌: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶವಂತಪುರ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್, ವಿಧಾನಸಭೆ ಚುನಾವಣೆ ಬಳಿಕ ಪಕ್ಷದ ವರಿಷ್ಠರ ಜತೆಗಿನ ಮುನಿಸಿನ ಕಾರಣಕ್ಕೆ ಮತ್ತೆ ತಮ್ಮ ಮಾತೃ ಪಕ್ಷವಾದ ಕಾಂಗ್ರೆಸ್‌ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಪಕ್ಷದ ವೇದಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಸೋಮಶೇಖರ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ರಾತ್ರಿ ಕರೆದಿದ್ದ ‘ಮುಂಬೈ ಮಿತ್ರ ಮಂಡಳಿ’ ಸಭೆಗೂ ಗೈರಾಗಿ ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮುಂಬೈ ಮಿತ್ರ ಮಂಡಳಿಯ 17 ಜನ ಹಾಲಿ ಹಾಗೂ ಮಾಜಿ ಶಾಸಕರಲ್ಲಿ ಕೆಲವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಎಚ್ಚೆತ್ತಿದ್ದ ಬಿಜೆಪಿ ಮುಖಂಡರು, ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿ ಕಾಂಗ್ರೆಸ್‌ನಿಂದ ವಲಸೆ ಬಂದವರ ಮನವೊಲಿಸುವ ಕೆಲಸ ಮಾಡಿದ್ದರು. ಕೆಲ ದಿನಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ನನ್ನ ರಾಜಕೀಯ ಗುರುಗಳು ಎಂದು ಹೇಳಿದ್ದ ಎಸ್.ಟಿ.ಸೋಮಶೇಖರ್ ಇದೀಗ ಬಿಎಸ್‌ವೈ ಸಭೆಗೆ ಹಾಜರಾಗದೆ ಪಕ್ಷ ತೊರೆಯುವ ಸಂದೇಶ ರವಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಎಸ್‌ವೈ ನೇತೃತ್ವದಲ್ಲಿ ನಡೆದ ಸಭೆ ಗೈರಾಗುವ ಮೂಲಕ ಎಸ್‌ಟಿಎಸ್‌ ಪರೋಕ್ಷವಾಗಿ ಒಂದು ಕಾಲು ಬಿಜೆಪಿಯಿಂದ ಹೊರಗಿಟ್ಟಿದ್ದಾರೆ ಎನ್ನಲಾಗಿದೆ. ಸೋಮಶೇಖರ್ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದಾಗ ಅವರ ಜತೆಗೇ ಬಂದಿದ್ದ ಹಲವಾರು ಮಾಜಿ ಕಾರ್ಪೋರೇಟರ್‌ಗಳು ಮತ್ತು ಮುಖಂಡರು ಇದೀಗ ಕಾಂಗ್ರೆಸ್‌ಗೆ ವಾಪಸ್ಸಾಗುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ. ತನ್ನ ಬೆಂಬಲಿಗರ ಅಸಮಾಧಾನ ಹಿನ್ನೆಲೆ ಸೋಮಶೇಖರ್ ಸಭೆಗೆ ಹಾಜರಾಗಿಲ್ಲ ಎನ್ನಲಾಗಿದೆ.

ಶುಕ್ರವಾರ ಇಡೀ ದಿನ ಬೆಂಗಳೂರಿನಲ್ಲೇ ಇದ್ದ ಎಸ್ ಟಿ ಎಸ್ ಸಭೆಗೆ ಹಾಜರಾಗದೇ ಇರುವುದು ಅವರು ಪಕ್ಷ ತೊರೆಯುವ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಎಸ್ ಟಿ ಸೋಮಶೇಖರ್ ಮುಂದಿನ ನಡೆ ಏನಾಗಬಹುದು ಎಂಬುದು ಸದ್ಯದ ಕುತೂಹಲವಾಗಿದ್ದು, ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರೋದು ಬಹುತೇಕ ಖಚಿತ ಎನ್ನುತ್ತಿದೆ ಕಾಂಗ್ರೆಸ್‌ ಮತ್ತು ಬಿಜೆಪಿ ಮೂಲಗಳು.

ಬಿಜೆಪಿಗೆ ರಾಜೀನಾಮೆ?

ಶಾಸಕ ಸೋಮಶೇಖರ್ ಅವರ ಬಹುತೇಕ ಬೆಂಬಲಿಗರು ಈಗಾಗಲೇ ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಕಾರ್ಯಕರ್ತರ ಜತೆ ಈಗಾಗಲೇ ಸಭೆ ನಡೆಸಿರುವ ಅವರು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ರಾಜೀನಾಮೆ ಸಲ್ಲಿಸುವ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೋಮಶೇಖರ್ ಅವರ ರಾಜೀನಾಮೆಯಿಂದ ತೆರವಾಗುವ ಯಶವಂತಪುರ ಕ್ಷೇತ್ರಕ್ಕೆ ಅವರ ಪುತ್ರ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತಂದೆ ಲೋಕಸಭೆ, ಪುತ್ರ ವಿಧಾನಸಭೆಗೆ ಎಂಬ ಲೆಕ್ಕಾಚಾರದಲ್ಲಿರುವ ಸೋಮಶೇಖರ್ ಕಾಂಗ್ರೆಸ್‌ ಸೇರ್ಪಡೆಗೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೂಡ ಅಸ್ತು ಎಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ತೊರೆಯುವುದಕ್ಕೆ ಕಾರಣವೇನು?

ಅಷ್ಟಕ್ಕೂ ಎಸ್ ಟಿ ಸೋಮಶೇಖರ್ ಮರಳಿ ಕಾಂಗ್ರೆಸ್ ಸೇರುವ ಲೆಕ್ಕಾಚಾರ ಯಾಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಯಶವಂತಪುರ ಕ್ಷೇತ್ರದ ಬಿಜೆಪಿ ಮೂಲ ಕಾರ್ಯಕರ್ತರು ಹಾಗೂ ಕಾಂಗ್ರೆಸ್‌ನಿಂದ ಬಂದಿರುವ ಎಸ್ ಟಿ ಎಸ್ ಬೆಂಬಲಿಗರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಆದ್ದರಿಂದದಲೇ ಸೋಮಶೇಖರ್ ಬೆಂಬಲಿಗರ ಕಾಂಗ್ರೆಸ್ ಸೇರುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ