ಮಿಜೋರಾಂ: ಐಜ್ವಾಲ್‌ನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಸೈರಾಂಗ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಸೇತುವೆ ಕುಸಿದು ಬಿದ್ದಿದ್ದು, ಕನಿಷ್ಠ 18 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಐಜ್ವಾಲ್ ನಗರದಿಂದ 19 ಕಿ.ಮೀ ದೂರದಲ್ಲಿರುವ ಸೈರಾಂಗ್ನಲ್ಲಿ ಈ ಘಟನೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರನ್ನು ರಕ್ಷಿಸಲು ದಿನವಿಡೀ ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿದೆ. ಈ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 100 ಮೀಟರ್ ಎತ್ತರದಲ್ಲಿದ್ದ ಸೇತುವೆ ಕುಸಿದು ಬಿದ್ದಿದೆ.
”ಸ್ಥಳದಿಂದ 16 ಮೃತ ದೇಹಗಳನ್ನು ಹೊರಗೆ ತೆಗೆಯಲಾಗಿದೆ. ಇನ್ನೆರಡು ಪತ್ತೆಯಾಗಿಲ್ಲ. ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಎಬಿಸಿಐ ಇನಫ್ರಾಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ” ಎಂದು ಮಿಜೋರಾಂ ಸಾರಿಗೆ ಸಚಿವ ಟಿ.ಜೆ. ಲಾಲ್ನುಂಟ್ಲುವಾಂಗಾ ತಿಳಿಸಿದ್ದಾರೆ.
ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ: “ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಘಟನೆಯ ಸಮಯದಲ್ಲಿ ರೈಲ್ವೆ ಸುರಕ್ಷತಾ ತಂಡವು ಈಗಾಗಲೇ ಸ್ಥಳದಲ್ಲಿತ್ತು. ನಿರ್ಮಾಣ ಹಂತದಲ್ಲಿರುವ ಸೇತುವೆಯಲ್ಲಿ ಸ್ಟೀಲ್ ಗರ್ಡರ್ ಅನ್ನು ಪ್ರಾರಂಭಿಸುವ ಕೆಲಸವನ್ನು ಗುತ್ತಿಗೆದಾರರೊಬ್ಬರು ಮಾಡುತ್ತಿದ್ದು, ಇದೇ ಗರ್ಡರ್ ಕುಸಿದಿದೆ. ಅರ್ಧ ಗಂಟೆಯೊಳಗೆ ಎನ್‌ಡಿಆರ್‌ಎಫ್ ಸ್ಥಳಕ್ಕೆ ತಲುಪಿದೆ. ಈಗ ರಾಜ್ಯ ವಿಪತ್ತು ತಂಡವು ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಕುಸಿತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಈಶಾನ್ಯ ಗಡಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಬ್ಯಸಾಚಿ ಡಿ. ಹೇಳಿದ್ದಾರೆ.
ಪರಿಹಾರ ಘೋಷಣೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಘೋಷಿಸಿದ್ದಾರೆ. ಇದರೊಂದಿಗೆ ರೈಲ್ವೆ ಸಚಿವಾಲಯದ ಅಧಿಕಾರಿಗಳು, ಮೃತರ ಕುಟುಂಬಕ್ಕೆ 10 ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಮತ್ತು ಇತರ ಗಾಯಾಳುಗಳಿಗೆ 50,000 ರೂ. ನೀಡುವುದಾಗಿ ತಿಳಿಸಿದ್ದಾರೆ.