ದೆಹಲಿ, ಡಿ.19: ಸಂಸತ್ ಭದ್ರತಾ ಲೋಪ ವಿಚಾರವಾಗಿ ಪ್ರಧಾನಿ ಮೋದಿ (Narendra Modi) ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಆರೋಪಿಗಳಿಗೆ ವಿರೋಧ ಪಕ್ಷಗಳ ಬೆಂಬಲವಿದೆ ಎಂದು ಆರೋಪಿಸಿದ ಅವರು, ಆರೋಪಿಗಳನ್ನು ಪ್ರತಿಪಕ್ಷಗಳು ಬೆಂಬಲಿಸುವುದು ಬಹಳ ಅಪಾಯಕಾರಿ. ಸಂಸತ್ತಿನ ಭದ್ರತೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ವರ್ತನೆ ಸರಿಯಲ್ಲ. ಪ್ರತಿಪಕ್ಷಗಳ ವರ್ತನೆ ಬೇಸರ ಉಂಟುಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರತಿಪಕ್ಷಗಳು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಕೋಪ ಮತ್ತು ಹತಾಶೆಯಿಂದ ಪ್ರತಿಪಕ್ಷಗಳು ದೊಡ್ಡ ತಪ್ಪು ಮಾಡುತ್ತಿವೆ. ಕೆಲವು ಹಿರಿಯ ಅಸ್ವಸ್ಥ ನಾಯಕರು ಕೂಡ ಬಿಜೆಪಿಯನ್ನು ತೆಗೆದುಹಾಕುವ ಹೆಸರಿನಲ್ಲಿ ದೇಶದ ವಿರುದ್ಧವೇ ಸಕ್ರಿಯರಾಗಿದ್ದಾರೆ ಎಂದು ಮೋದಿ ಟೀಕಿಸಿದರು.
ಒಳ್ಳೆಯ ಮತ್ತು ಸಕಾರಾತ್ಮಕ ಕೆಲಸ ಮಾಡಲು ಕೆಲವರಿಗೆ ಮನಸಿಲ್ಲ. ಋಣಾತ್ಮಕ ರಾಜಕಾರಣ ಮಾಡುತ್ತಿರುವುದರಿಂದ 2024ರಲ್ಲೂ ಪ್ರತಿಪಕ್ಷಗಳು ಸೋಲು ಅನುಭವಿಸಬೇಕಾಗಲಿದೆ ಎಂದು ಮೋದಿ ಹೇಳಿದರು.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ತಮ್ಮ ಸ್ಥಾನದಲ್ಲೇ ಉಳಿಯಲು ಮನಸ್ಸು ಮಾಡಿವೆ ಎಂದು ತೋರುತ್ತದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿದವರ ಪರವಾಗಿ ಕೆಲವು ಪಕ್ಷಗಳು ಧ್ವನಿ ಎತ್ತುತ್ತಿವೆ. ಇದು ಕಳ್ಳತನದಷ್ಟೇ ಅಪಾಯಕಾರಿ ಮತ್ತು ಇದು ಅತ್ಯಂತ ದುರದೃಷ್ಟಕರ ಎಂದರು.
ಇಂದಿನ 18 ವರ್ಷದ ಮತದಾರರಿಗೆ 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ 8 ವರ್ಷವಾಗಿತ್ತು. ಅವರು ಹಗರಣಗಳ ಯುಗವನ್ನು ನೋಡಿಲ್ಲ. ಅವರು ಅಭಿವೃದ್ಧಿಯ ಯುಗವನ್ನು ನೋಡುತ್ತಿದ್ದಾರೆ. ಈ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಎಂದು ಮೋದಿ ಕರೆ ನೀಡಿದರು.