ಬೆಂಗಳೂರು: ಬಿಜೆಪಿ ಹಲವು ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿ ಪಕ್ಷಕ್ಕೆ ಸೆಳೆಯುವ ತಂತ್ರ ರೂಪಿಸಿರುವ ನಡುವೆ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಿಗದಿಯಾಗಿದೆ. ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಈ ಸಭೆ ನಡೆಯಲಿದ್ದು, ಹತ್ತಾರು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ.
ಜೊತೆಗೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟಕ್ಕೆ ಮುಂದಾಗಿದ್ದು, ಈ ಕುರಿತ ಸಿದ್ಧತೆ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಿದೆ. ಇದಲ್ಲದೆ ಲೋಕಸಭೆ ಚುನಾವಣೆಗೂ ಮುನ್ನ ಕೈಗೊಳ್ಳಬೇಕಾದ ಕಾರ್ಯಗಳು, ಕಾವೇರಿ ನೀರು ಬಿಡುಗಡೆ ಸಂಬಂಧ ಕಾಂಗ್ರೆಸ್ ವಿರುದ್ಧದ ಹೋರಾಟ, ಆಪರೇಷನ್ ಹಸ್ತ ವಿಫಲಗೊಳಿಸುವುದು, ಆಂತರಿಕ ಅಸಮಾಧಾನಗಳು, ಬಿಬಿಎಂಪಿ ವಾರ್ಡ್ ಮರುವಿಂಗಡಣೆ, ಕಾಂಗ್ರೆಸ್ ಸಚಿವರ ಪತ್ರ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ.
ಪ್ರಮುಖವಾಗಿ ಪಕ್ಷದಲ್ಲಿ ಮುನಿಸಿಕೊಂಡಿರುವ ನಾಯಕರ ಸಮಸ್ಯೆ ಆಲಿಸುವುದು ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ಮುಂದಿನ ಹೋರಾಟಕ್ಕೆ ರೂಪುರೇಷೆ ರಚಿಸುವ ಕುರಿತು ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಶಾಸಕ ಸಿ.ಟಿ. ರವಿ ಸೇರಿ ಹಲವರು ಭಾಗಿಯಾಗಲಿದ್ದಾರೆ.