Dutee Chand: ಭಾರತದ ವೇಗದ ಓಟಗಾರ್ತಿ ದ್ಯುತಿ ಚಂದ್, ಉದ್ದೀಪನ ಮದ್ದು ಸೇವನೆ ಮಾಡಿದ ಕಾರಣ ಅವರನ್ನು 4 ವರ್ಷಗಳ ನಿಷೇಧ ಮಾಡಲಾಗಿದೆ.
ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪರಿಣಾಮ ಭಾರತದ ಸ್ಟಾರ್ ವೇಗ ಓಟಗಾರ್ತಿ ದ್ಯುತಿ ಚಂದ್ (Dutee Chand) 4 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ. ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು ಈ ಶಿಕ್ಷೆ ವಿಧಿಸಿದೆ. ಇದರೊಂದಿಗೆ ಮುಂದಿನ ತಿಂಗಳು ನಡೆಯುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ.
2022ರ ಡಿಸೆಂಬರ್ 5ರಂದು ಭುವನೇಶ್ವರದಲ್ಲಿ ದ್ಯುತಿ ಅವರಿಂದ ಟೆಸ್ಟ್ ನಡೆಸಲು ಸ್ಯಾಂಪಲ್ ಪಡೆಯಲಾಗಿತ್ತು. ಈ ಮಾದರಿಯಲ್ಲಿ ನಿಷೇಧಿತ ಅಂಶ ಇರುವುದು ಸಂಸ್ಥೆ ನಡೆಸಿದ ವರದಿಯಲ್ಲಿ ತಿಳಿದು ಬಂದಿದೆ. ಈ ಅಂಶವನ್ನು ಸ್ನಾಯುಗಳ ಮತ್ತು ಮೂಳೆಗಳ ಬಲವರ್ಧನೆಗಾಗಿ ಈ ಸೇವಿಸಲಾಗಿತ್ತು. ಆ ಬಳಿಕ ರಾಷ್ಟ್ರೀಯ ಉದ್ದೀಪನ ಮದ್ದು ಪಡೆಯ ಘಟಕವು ನೋಟಿಸ್ ನೀಡಿ ತಾತ್ಕಾಲಿಕವಾಗಿ ನಿಷೇಧಿಸಿತ್ತು.
2027ರವರೆಗೆ ನಿಷೇಧ
ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು ಇದೀಗ 4 ವರ್ಷಗಳ ನಿಷೇಧದ ಶಿಕ್ಷೆಗೆ ಒಳಪಡಿಸಿದೆ. ಹಾಗಾಗಿ ಇನ್ಮುಂದೆ ದ್ಯುತಿ 4 ವರ್ಷಗಳ ಕಾಲ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ನಿಷೇಧದ ಅವಧಿಯು ಜನವರಿ 3, 2023 ರಿಂದ ಜಾರಿಗೆ ಬರಲಿದೆ. ಇದು ಜನವರಿ 2027 ರವರೆಗೆ ಮುಂದುವರಿಯುತ್ತದೆ.
ಬಿ ಸ್ಯಾಂಪಲ್ನಲ್ಲೂ ಸಾಬೀತು
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ (NADA) 2.1 ಮತ್ತು 2.2ರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ದ್ಯುತಿಯನ್ನು ನಿಷೇಧಿಸಲಾಗಿದೆ.ಆರಂಭದಲ್ಲಿ ಎ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿತ್ತು. ಆದರೆ ಮದ್ದಿನ ಅಂಶ ಮಾತ್ರ ಕಂಡು ಬಂದಿತ್ತು. ಬಳಿಕ ಬಿ ಮಾದರಿಯಲ್ಲಿ ಪರೀಕ್ಷೆ ನಡೆಸಿದಾಗ ನಿಷೇಧಿತ ಮದ್ದು ಸೇವನೆ ಸಾಬೀತಾಗಿದೆ. ಒಂದು ಬಿ ಮಾದರಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದ್ದರೆ ಅವರು ಬ್ಯಾನ್ ಶಿಕ್ಷೆಗೆ ಒಳಪಡುತ್ತಿರಲಿಲ್ಲ.
ಎಲ್ಲಾ ಫಲಿತಾಂಶಗಳು ಈಗ ಅನರ್ಹ
2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ 100 ಮೀ ಮತ್ತು 200 ಮೀ ಓಟಗಳಲ್ಲಿ ಡಬಲ್ ಬೆಳ್ಳಿ ಪದಕ ವಿಜೇತೆ ದ್ಯುತಿ, 21 ದಿನಗಳ ಒಳಗೆ ಈ ಕುರಿತಂತೆ ಮೇಲ್ಮನವಿ ಸಲ್ಲಿಸಬಹುದು. 2021ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ 11.17 ಸೆಕೆಂಡ್‌ಗಳಲ್ಲಿ 100 ಮೀಟರ್ ಓಡುವ ಮೂಲಕ ಹೊಸ ದಾಖಲೆ ಬರೆದಿದ್ದರು. ಸದ್ಯ ನಿಷೇಧಕ್ಕೆ ಒಳಗಾದ ಕಾರಣ, ಅವರ ಎಲ್ಲಾ ಸ್ಪರ್ಧಾತ್ಮಕ ಫಲಿತಾಂಶಗಳನ್ನು ಅನರ್ಹ ಮಾಡಲಾಗುತ್ತದೆ.
ವೈದ್ಯರನ್ನೇ ಸಂಪರ್ಕಿಸಿಲ್ಲ
ಅಷ್ಟೇ ಅಲ್ಲದೆ, ಈವರೆಗೂ ಅವರು ಗೆದ್ದಿರುವ ಪದಕಗಳು, ಅಂಕ, ಬಹುಮಾನಗಳನ್ನೂ ವಾಪಸ್ ಪಡೆದುಕೊಳ್ಳಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ದ್ಯುತಿ ಅವರು ವೈದ್ಯರನ್ನು ಸಂಪರ್ಕಿಸದೆ ಫಿಸಿಯೋಥೆರಪಿಸ್ಟ್ ನೀಡಿದ ಶಿಫಾರಸ್ಸಿನ ಮೇರೆಗೆ ನಿಷೇಧಿತ ಔಷಧ ಸೇವಿಸಿದ್ದಾರೆ. ಈಕೆ ಸೇವಿಸಿದ ಪದಾರ್ಥವನ್ನು ಇತ್ತೀಚೆಗಷ್ಟೇ ವಾಡಾ ತನ್ನ ನಿಷೇಧಿತ ಪದಾರ್ಥಗಳ ಪಟ್ಟಿಗೆ ಸೇರಿಸಿತ್ತು. ಹಾಗಾಗಿ ಶಿಕ್ಷೆಗೆ ಗುರಿಯಾಗುವಂತೆ ಮಾಡಿದೆ.