ವಾಷಿಂಗ್ಟನ್ ಡಿಸಿ (ಅಮೆರಿಕ) : ಜಾರ್ಜಿಯಾದಲ್ಲಿ 2020ರ ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಸಂಯುಕ್ತ ಸಂಸ್ಥಾನದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫುಲ್ಟನ್ ಕೌಂಟಿ ಜೈಲಿಗೆ ಶರಣಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಡೊನಾಲ್ಡ್ ಟ್ರಂಪ್ ಮತ್ತು ಇತರ 18 ಆರೋಪಿಗಳು 2020 ರ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಜಾರ್ಜಿಯಾದ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡುವಂತೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ಸೋಮವಾರ ಈ ಕುರಿತು ಫುಲ್ಟನ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಫಾನಿ ವಿಲ್ಲಿಸ್ ವಿಚಾರಣೆ ನಡೆಸಿದ್ದು, ಮುಂದಿನ ಆಗಸ್ಟ್ 25 ರೊಳಗೆ ಟ್ರಂಪ್ ಸೇರಿದಂತೆ ಎಲ್ಲ ಆರೋಪಿಗಳನ್ನು ಶರಣಾಗುವಂತೆ ಸೂಚಿಸಿದ್ದಾರೆ. ಟ್ರಂಪ್ ಅವರ ಮಾಜಿ ವಕೀಲ ರುಡಿ ಗಿಲಿಯಾನಿ, ಶ್ವೇತಭವನದ ಮಾಜಿ ವಕೀಲ ಜಾನ್ ಈಸ್ಟ್‌ಮನ್, ಶ್ವೇತಭವನ ಸಿಬ್ಬಂದಿ ಮಾಜಿ ಮುಖ್ಯಸ್ಥ ಮಾರ್ಕ್ ಮಿಡೋವ್ಸ್, ನ್ಯಾಯಾಂಗ ಇಲಾಖೆಯ ಮಾಜಿ ಅಧಿಕಾರಿ ಜೆಫ್ರಿ ಕ್ಲಾರ್ಕ್ ಆಪಾದಿತರ ಪೈಕಿ ಪ್ರಮುಖರಾಗಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಫುಲ್ಟನ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಫಾನಿ ವಿಲ್ಲಿಸ್, “ಆಗಸ್ಟ್ 25, 2023 ರ ಶುಕ್ರವಾರದ ಒಳಗೆ ಸ್ವಯಂಪ್ರೇರಣೆಯಿಂದ ಶರಣಾಗಲು ನಾನು ಪ್ರತಿವಾದಿಗಳಿಗೆ ಅವಕಾಶವನ್ನು ನೀಡುತ್ತಿದ್ದೇನೆ “. ಶೀಘ್ರವಾಗಿ ಪ್ರಕರಣದ ವಿಚಾರಣೆ ನಡೆಸಲಾಗುವುದು, ಮುಂದಿನ ಆರು ತಿಂಗಳೊಳಗೆ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು. ಇನ್ನು ಟ್ರಂಪ್ ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಒಟ್ಟು 91 ಆರೋಪಗಳನ್ನು ಎದುರಿಸುತ್ತಿದ್ದಾರೆ. ಜಾರ್ಜಿಯಾದಲ್ಲಿ ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಲು ಯತ್ನಿಸಿರುವುದು ಹಿಂದಿನ ಮೂರು ಕ್ರಿಮಿನಲ್ ಪ್ರಕರಣಗಳಿಗಿಂತ ಭಿನ್ನವಾಗಿದೆ. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಶ್ವೇತಭವನವನ್ನು ಮತ್ತೊಮ್ಮೆ ಪ್ರವೇಶಿಸಬೇಕು ಎಂಬ ಪ್ರಯತ್ನದಲ್ಲಿರುವ ಟ್ರಂಪ್ ವಿರುದ್ಧ ಹೊರಿಸಲಾಗಿರುವ ನಾಲ್ಕನೇ ಕ್ರಿಮಿನಲ್ ಆರೋಪ ಇದಾಗಿದೆ.
ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಲ್ಲಿರುವ ಅಥವಾ ಅವರ ಅವಧಿಯ ಬಳಿಕ ದೇಶದ 247 ವರ್ಷಗಳ ಇತಿಹಾಸದಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಇಷ್ಟೆಲ್ಲ ಆರೋಪಗಳ ಹೊರತಾಗಿಯೂ ಅವರು 2024 ರಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.