ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹಾತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ಯಶಸ್ಸು ಕಂಡಿದ್ದು, ನಿನ್ನೆ ಸಂಜೆ ಆರು ಗಂಟೆ ಸುಮಾರಿಗೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡ್ ಮಾಡುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇದೀಗ ಮತ್ತೊಂದು ಸುದ್ದಿ ಹಂಚಿಕೊಂಡಿರುವ ಇಸ್ರೋ, ‘ಭಾರತದಲ್ಲಿ ತಯಾರಿಸಲಾಗಿದೆ; ಚಂದ್ರನಿಗಾಗಿ ಮಾಡಲ್ಪಟ್ಟಿದೆ. ಸಿ ಎಚ್-3 ರೋವರ್ ಲ್ಯಾಂಡರ್‌ನಿಂದ ಕೆಳಕ್ಕೆ ಇಳಿಯಿತು ಮತ್ತು ಚಂದ್ರನ ಮೇಲೆ ಭಾರತ ನಡೆದಾಡಿದೆ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು’ ಎಂದು ಟ್ವೀಟ್ ಮಾಡಿದೆ. ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಚಂದ್ರನ ಅಂಗಳಕ್ಕಿಳಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ. ಮೈಕ್ರೋವೇವ್ ಓವನ್ ಗಾತ್ರದ ರೋವರ್ ಅನ್ನು ಚಂದ್ರನ ಮೇಲ್ಮೈಯಲ್ಲಿ 500 ಮೀಟರ್ (1,640 ಅಡಿ) ವರೆಗೆ ಪ್ರಯಾಣಿಸಲು ವಿನ್ಯಾಸಗೊಳಿಸಲಾಗಿದೆ. ಇದು ಚಂದ್ರನ ಭೂವಿಜ್ಞಾನ, ಖನಿಜಶಾಸ್ತ್ರ ಮತ್ತು ವಾತಾವರಣವನ್ನು ಅಧ್ಯಯನ ಮಾಡಿ ಮಾಹಿತಿ ಒದಗಿಸುತ್ತದೆ.
ಚಂದ್ರಯಾನ-3 ಯೋಜನೆಯು ಇಸ್ರೋ ಸಂಸ್ಥೆಯ ಮೂರನೇ ಚಂದ್ರಯಾನವಾಗಿದೆ. ಮೊದಲನೆಯದು, ಚಂದ್ರಯಾನ-1 ಅನ್ನು 2008ರಲ್ಲಿ ಪ್ರಾರಂಭಿಸಲಾಯಿತು. ಅದು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿತು. ಎರಡನೆಯದು, ಚಂದ್ರಯಾನ-2 ಅನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಆದರೆ, ಲ್ಯಾಂಡರ್ ಚಂದ್ರನ ಮೇಲೆ ಇಳಿಯಲು ವಿಫಲವಾಯಿತು.
ಚಂದ್ರಯಾನ-3ರ ಯಶಸ್ವಿ ಲ್ಯಾಂಡಿಂಗ್ ಮೂಲಕ ಅಮೆರಿಕಾ, ಸೋವಿಯತ್ ಯೂನಿಯನ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಗ್ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ.
ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲಾಗಿದ್ದು, ಇದರಲ್ಲಿ ಅತ್ಯಾಧುನಿಕ ಕ್ಯಾಮೆರಾ, ಸ್ಪೆಕ್ಟ್ರೋಮೀಟರ್ ಮತ್ತು ಮ್ಯಾಗ್ನೆಟೋಮೀಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಚಂದ್ರನ ಮೇಲ್ಮೈ ಸಂಯೋಜನೆ, ಖನಿಜಶಾಸ್ತ್ರ ಮತ್ತು ಇತಿಹಾಸವನ್ನು ಒಳಗೊಂಡಂತೆ ಅಧ್ಯಯನ ಮಾಡಲು ರೋವರ್ ಪ್ರಯೋಗಗಳನ್ನು ನಡೆಸಿ ಮಾಹಿತಿ ಒದಗಿಸುತ್ತದೆ. ಪ್ರಗ್ಯಾನ್ ರೋವರ್ ಒಂದು ಚಂದ್ರನ ದಿನಕ್ಕೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಅಂದರೆ, ಸುಮಾರು 14 ಭೂಮಿಯ ದಿನಗಳು. ಇದು ಸೌರ ಫಲಕಗಳಿಂದ ಚಾಲಿತವಾಗಲಿದ್ದು, ಬೆಂಗಳೂರಿನ ಪೀಣ್ಯದ ಇಸ್ರೋ ಕೆಂದ್ರ ಕಚೇರಿಯಲ್ಲಿರುವ ಚಂದ್ರಯಾನ-3 ಆರ್ಬಿಟರ್‌ನೊಂದಿಗೆ ಸಂವಹನ ನಡೆಸಲಿದೆ.