KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಕೆಆರ್‌ಎಸ್‌ ಡ್ಯಾಂ: ವಾರದಲ್ಲಿ 7 ಟಿಎಂಸಿ ನೀರು ಖಾಲಿ; ಮಂಡ್ಯ ರೈತರಲ್ಲಿ ಆತಂಕ!

ಕೆಆರ್‌ಎಸ್‌ ಡ್ಯಾಂ: ವಾರದಲ್ಲಿ 7 ಟಿಎಂಸಿ ನೀರು ಖಾಲಿ; ಮಂಡ್ಯ ರೈತರಲ್ಲಿ ಆತಂಕ!

ಮಂಡ್ಯ: ಜಿಲ್ಲೆಯ ಕೃಷ್ಣರಾಜ ಸಾಗರ (KRS) ಡ್ಯಾಂನಿಂದ ಒಂದೇ ವಾರದಲ್ಲಿ ಏಳು ಟಿಎಂಸಿ ನೀರು ಖಾಲಿಯಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಮೇರೆಗೆ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಮಂಡ್ಯ ಜಿಲ್ಲೆಯ ರೈತರು ಬೆಳೆ ಒಣಗುವ ಆತಂಕಕ್ಕೆ ಒಳಗಾಗಿದ್ದಾರೆ.

ಪಶ್ಚಿಮಘಟ್ಟದಲ್ಲಿ ಮುಂಗಾರು ಕೊರತೆಯಿಂದಾಗಿ KRS ನೀರಿನ ಒಳಹರಿವು ದಿನೇದಿನೆ ಕುಸಿತ ಕಾಣುತ್ತಿದೆ. ನೀರಿನ ಕೊರತೆ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲೇ ಡ್ಯಾಂ ಬರಿದಾಗುವ ಆತಂಕ ಎದುರಾಗಿದೆ. ಕಳೆದ ಬುಧವಾರ ಕೆಆರ್‌ಎಸ್‌ ಡ್ಯಾಂನಲ್ಲಿ 32.330 ಟಿಎಂಸಿ ನೀರಿತ್ತು. ಇಂದು ಡ್ಯಾಂನಲ್ಲಿ 26.284 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದೆ. 26.284 ಟಿಎಂಸಿ ಪೈಕಿ 17.905 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಸಾಕಷ್ಟು ವಿರೋಧದ ನಡುವೆಯೂ ತಮಿಳುನಾಡಿಗೆ 9,172 ಕ್ಯೂಸೆಕ್ ನೀರನ್ನು ಇಂದು ಹರಿಸಲಾಗಿದೆ.

‘ಇನ್ನೊಂದು ವಾರ ಹೀಗೆ ತಮಿಳುನಾಡಿಗೆ ನೀರು ಹರಿಸಿದರೆ ನೀರಿನ ಸಾಂದ್ರತೆಯಲ್ಲಿ ಮತ್ತಷ್ಟು ಕುಸಿತ ಕಾಣುತ್ತದೆ. ನೀರಿನ ಶೇಖರಣೆ ಕುಸಿದರೆ ಕಾವೇರಿ ಅಚ್ಚುಕಟ್ಟು ಭಾಗದ ಭತ್ತ ಹಾಗೂ ಕಬ್ಬು ಬೆಳೆಗಳಿಗೆ ನೀರು ಸಿಗೋದು ಅನುಮಾನ ಎಂದು ರೈತರಲ್ಲಿ ಆತಂಕ ಮನೆಮಾಡಿದೆ.

ಕೆಆರ್‌ಎಸ್‌ ಡ್ಯಾಂನ ಇಂದಿನ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿಗಳು
ಇಂದಿನ ಮಟ್ಟ – 104.20 ಅಡಿಗಳು
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 26.284 ಟಿಎಂಸಿ
ಒಳ ಹರಿವು – 4,791 ಕ್ಯೂಸೆಕ್
ಹೊರ ಹರಿವು – 11,788 ಕ್ಯೂಸೆಕ್

ಹೆಚ್ಚಿನ ಸುದ್ದಿ