ಮೈಸೂರು, ಡಿ.16: ಲೋಕಸಭೆ ಕಲಾಪದ ವೇಳೆ ಭದ್ರತಾ ಲೋಪ (Parliament Security Breach) ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನ ವಿಜಯನಗರದಲ್ಲಿರುವ ಆರೋಪಿ ಮನೋರಂಜನ್ (D Manoranjan) ಕುಟುಂಬಸ್ಥರಿಗೆ ಈಗ ಸಂಕಷ್ಟ ಎದುರಾಗಿದೆ. ಶುಕ್ರವಾರವಷ್ಟೇ ಅವರ ಮನೆಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು, ಇದೀಗ ಮೈಸೂರು ಬಿಟ್ಟು ಎಲ್ಲೂ ತೆರಳದಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದ್ದಾರೆ.
ನಮ್ಮ ಸೂಚನೆ ಬರುವವರೆಗೂ ಮೈಸೂರಿನಿಂದ ಹೊರಗಡೆ ತೆರಳಬೇಡಿ. ತೀರಾ ತುರ್ತು ಇದ್ದರೆ ನಮ್ಮ ಗಮನಕ್ಕೆ ತಂದು ಅನುಮತಿ ಮೇಲೆ ತೆರಳಿ. ಮನೆಗೆ ಯಾವ ಸಂಬಂಧಿಕರಿಗೂ ಸದ್ಯಕ್ಕೆ ಬಾರದಂತೆ ಸೂಚನೆ ಕೊಡಿ. ಪ್ರತಿ ನಿತ್ಯ ನಿಮಗೆ ಬರುವ ಕರೆಗಳ ಮಾಹಿತಿಯನ್ನು ಕಡ್ಡಾಯವಾಗಿ ನಮಗೆ ತಿಳಿಸಿ. ಎಲ್ಲಾ ಕರೆಗಳನ್ನು ತಪ್ಪದೆ ಸ್ವೀಕರಿಸಬೇಕು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಮನೋರಂಜನ್ ಕುಟುಂಬದವರಿಗೆ ಸೂಚಿಸಿದ್ದಾರೆ.
ಮುಂದಿನ ಸೂಚನೆ ನೀಡುವ ವರೆಗೂ ಯಾವುದೇ ಪತ್ರಿಕೆ, ಹಳೆಯ ಪುಸ್ತಕ ಮಾರಾಟ ಮಾಡಬೇಡಿ ಎಂದು ಆರೋಪಿ ಮನೋರಂಜನ್ ಪೋಷಕರಿಗೆ ಗುಪ್ತಚರ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಶುಕ್ರವಾರ ಮನೋರಂಜನ್ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಸಮಯದಿಂದ ಮನೋರಂಜನ್ ಮನೆಯಲ್ಲಿ ತಪಾಸಣೆ ನಡೆಸಿ ಹಿಂದಿರುಗಿದ್ದರು.
ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಹಳದಿ ಅನಿಲದಿಂದ ತುಂಬಿರುವ ಡಬ್ಬಿಗಳನ್ನು ತೆರೆದು ಸ್ಪ್ರೇ ಮಾಡಿದ್ದರು. ಬಳಿಕ ಲೋಕಸಭೆ ಸಂಸದರು ಅವರನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು. ಘಟನೆಯು ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದೆ. ಇದೀಗ ವಿವಿಧ ಆಯಾಮಗಳಲ್ಲಿ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಮೈಸೂರಿನ ವಿಜಯನಗರದಲ್ಲಿರುವ ಮನೋರಂಜನ್ ಮನೆಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಶೋಧ ಕಾರ್ಯ ನಡೆಸಿದ್ದಾರೆ.