ಬೆಂಗಳೂರು : August 16: CM ಸಿದ್ದರಾಮಯ್ಯ ಹಾಗೂ DCM ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಜಿಲ್ಲಾ ಮುಖಂಡರ ಸಭೆ ಇಂದೂ ಕೂಡ ಮುಂದುವರಿದಿದ್ದು, ಬೆಂಗಳೂರು, ಕೋಲಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮುಖಂಡರ ಸಭೆ ಇಂದು ನಡೆಯಲಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣದಲ್ಲಿ ಇಂದು ಬೆಳಗ್ಗೆ ಬೆಂಗಳೂರು ನಗರ ಜಿಲ್ಲೆ ಶಾಸಕರ ಸಭೆ ನಡೆಯಲಿದೆ. ಸಂಜೆ 4 ಗಂಟೆಗೆ ಕೋಲಾರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅನುದಾನ ಬಿಡುಗಡೆ, ಗ್ಯಾರಂಟಿ ಅನಷ್ಠಾನ, ಲೋಕಸಭೆ ಚುನಾವಣೆ ತಯಾರಿ ಹಾಗೂ ಅಭಿವೃದ್ಧಿ ಕಾರ್ಯಗಳ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಲೋಕಾಸಭಾ ಚುನಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ಸಿಎಂ ಸಭೆಯಲ್ಲಿ ಚರ್ಚೆ ಆಗುತ್ತಾ ಬಾಕಿ ಬಿಲ್ ವಿಚಾರ?
ಬೆಂಗಳೂರು ನಗರ ಶಾಸಕರ ಸಭೆಯಲ್ಲಿ ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ವಿಚಾರ ಚರ್ಚೆಯಾಗುವ ಸಾಧ್ಯತೆಗಳಿವೆ. ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಬಗ್ಗೆ ಶಾಸಕರು ಬೇಡಿಕೆ ಇಡುವ ಸಾಧ್ಯತೆ ಇದೆ. ಗುತ್ತಿಗೆದಾರರಿಂದ ಸರ್ಕಾರದ ಮೇಲೆ ಆರೋಪ ಹೆಚ್ಚಾಗಿರುವುದರಿಂದ ಬಿಬಿಎಂಪಿ ಕಾಮಗಾರಿ ವಿಚಾರ ಹೆಚ್ಚಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಬಾಕಿ ಬಿಲ್ ಪಾವತಿ ಬಗ್ಗೆ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿಲಿದ್ದಾರೆ ಎನ್ನಲಾಗಿದೆ.