KRGRV
Monday, December 23, 2024
Homeಜಿಲ್ಲಾ ಸುದ್ದಿಗಳುಯಾರೂ ಪಕ್ಷ ಬಿಟ್ಟು ಹೋಗಲ್ಲ, ಮೈತ್ರಿ ಉಳಿಸಿಕೊಳ್ಳುವಲ್ಲಿ‌ ಕಾಂಗ್ರೆಸ್ ವಿಫಲ: ಪ್ರಹ್ಲಾದ್ ಜೋಶಿ

ಯಾರೂ ಪಕ್ಷ ಬಿಟ್ಟು ಹೋಗಲ್ಲ, ಮೈತ್ರಿ ಉಳಿಸಿಕೊಳ್ಳುವಲ್ಲಿ‌ ಕಾಂಗ್ರೆಸ್ ವಿಫಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ದೂರು ಕೊಟ್ಟ ಗುತ್ತಿಗೆದಾರರನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ, ಗುತ್ತಿಗೆದಾರರನ್ನು ಹೆದರಿಸಿ, ಬೆದರಿಸಿ ಕೇಸ್​ ಉಲ್ಟಾ ಹೊಡೆಯುವ ಹಾಗೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, “ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ರಾಮಲಿಂಗಾರೆಡ್ಡಿಗೆ ಹೇಗೆ ಗೊತ್ತು?. ಅವರೇನು ಬಿಜೆಪಿ ಪಕ್ಷದಲ್ಲಿದ್ದಾರಾ?, ಸದ್ಯದಲ್ಲೇ ಪ್ರತಿಪಕ್ಷ ನಾಯಕನ ನೇಮಕವಾಗುತ್ತದೆ. ಚಲುವರಾಯಸ್ವಾಮಿ ಸೇರಿದಂತೆ ಮತ್ತೊಬ್ಬರ ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ. ಚಲುವರಾಯಸ್ವಾಮಿ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಮೊದಲು ಅವರು ರಾಜಿನಾಮೆ ಕೊಡಬೇಕು” ಎಂದು ಒತ್ತಾಯಿಸಿದರು.

“ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಗಟ್ಟಿ ನಿಲುವು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಕಾವೇರಿ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಮೈತ್ರಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಬರುವ ಸೀಟುಗಳು ಕಡಿಮೆ ಆಗುತ್ತದೆ ಅನ್ನುವ ಭಯ ಕಾಂಗ್ರೆಸ್​ನಲ್ಲಿದೆ. ಅನೇಕ ಪಕ್ಷಗಳ ಜೊತೆ ಮಾಡಿಕೊಂಡಿರುವ ಮೈತ್ರಿಯನ್ನು ಉಳಿಸಿಕೊಳ್ಳಲು‌ ಕಾಂಗ್ರೆಸ್ ವಿಫಲವಾಗಿದೆ” ಎಂದರು.

ಬಾಂಬೆಗೆ ತೆರಳಿದ್ದ ಶಾಸಕರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಸದ್ಯದ‌ ಮಟ್ಟಿಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಆ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ ಎಂದಿದ್ದಾರೆ. ಸೋಮಶೇಖರ್, ಹೆಬ್ಬಾರ್ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ನಾಳೆ ಏನಾಗುತ್ತೆ ಅಂತ ಹೇಳಲು ನಾನು ಭವಿಷ್ಯಗಾರನಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಮುನೇನಕೊಪ್ಪ ಕೂಡ ನನ್ನೊಂದಿಗೆ ಮಾತನಾಡಿದ್ದು, ಅವರು ಪಕ್ಷ ತೊರೆಯಲ್ಲ ಅಂದಿದ್ದಾರೆ. ನಾನು ಲೋಕಸಭೆಗೆ ಧಾರವಾಡದಿಂದಲೇ ಸ್ಪರ್ಧಿಸುವೆ” ಎಂದು ಸ್ಪಷ್ಟಪಡಿಸಿದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಮೋದಿಯವರ ನಾಯಕತ್ವ ಎಲ್ಲರಿಗೂ ಗೊತ್ತಿದೆ. ಹೀಗಾಗಿ, ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಕಾವೇರಿ ವಿಷಯ ಡೈವರ್ಟ್ ಮಾಡಲು ಪಕ್ಷಾಂತರ ವಿಚಾರ ಮುಂದೆ ತಂದಿದ್ದಾರೆ. ಭ್ರಷ್ಟಾಚಾರ ಹೆಚ್ಚಾಗಿದೆ ಅಂತಾ ಕಾಂಗ್ರೆಸ್ ಪಾರ್ಟಿಯವರೇ ಹೇಳ್ತಿದ್ದಾರೆ. ಕಾಂಗ್ರೆಸ್‌ಗೆ ನೇತೃತ್ವ ಮತ್ತು ನಿಯತ್ತಿಲ್ಲ. ಬಿಜೆಪಿ ಬಂಡೆಗಲ್ಲಂತೆ ಗಟ್ಟಿಯಾಗಿದೆ” ಎಂದು ಹೇಳಿದರು.

“ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಹಿನ್ನಡೆ, ಗ್ಯಾರಂಟಿಗಳ ಗೊಂದಲವಿದೆ. ಇದೇ ಕಾರಣಕ್ಕೆ ವಿಷಯ ಬೇರೆಡೆಗೆ ತಿರುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್​ನ​ವರು ಇತಿಹಾಸ ತಿಳಿದುಕೊಳ್ಳಲಿ. ಈ ಹಿಂದೆ ಮಣಿಪುರ ಸೇರಿದಂತೆ ಈಶಾನ್ಯ ಭಾರತದಲ್ಲಿ ಸಾಕಷ್ಟು ಗಲಭೆಗಳಾಗಿವೆ. ಒಂದೇ ಗಲಭೆಯಲ್ಲಿ ಏಳು ನೂರು ಜನರು ಸಾವನ್ನಪ್ಪಿರುವ ಇತಿಹಾಸವಿದೆ. ಒಬ್ಬರು ಸತ್ತರೂ ನಾವು ಸಂವೇದನಾಶೀಲವಾಗಿ ನೋಡುತ್ತೇವೆ. ಅವರ ಸರ್ಕಾರವಿದ್ದಾಗ ಪಿಎಂ, ಹೋಂ ಮಿನಿಸ್ಟರ್ ಯಾರೂ ಹೋಗಿರಲಿಲ್ಲ. ನಮ್ಮ ಗೃಹಮಂತ್ರಿ ಮೂರು ದಿನ ಮಣಿಪುರದಲ್ಲೇ ಇದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಅಲ್ಲಿ ಅಹಾರ ಕೊರತೆಯಾಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಯತ್ನಿಸಲಾಗುತ್ತಿದೆ” ಎಂದರು.

“ಗಣೇಶ ಹಬ್ಬ ನಮ್ಮ ಭಾಗದಲ್ಲಿ ವಿಜೃಂಭಣೆಯಿಂದ ಮಾಡುತ್ತೇವೆ. ಡಿಜೆ ಸೇರಿದಂತೆ ಯಾವುದೇ ನಿರ್ಬಂಧ ಹೇರಬಾರದು. ಹುಬ್ಬಳ್ಳಿಯ ಈದ್ಗಾ ಮೈದಾನ ಸಾರ್ವಜನಿಕರ ಆಸ್ತಿ. ಕಳೆದ ಬಾರಿ‌ ಗಣೇಶ ಕೂರಿಸಿದ್ದೇವೆ, ಈ ಬಾರಿ ರಾಜ್ಯ ಸರ್ಕಾರ ಯಾವುದೆ ಗೊಂದಲ ಮಾಡಲ್ಲ, ಮಹಾನಗರ ಪಾಲಿಕೆ ಸೂಕ್ತ ತೀರ್ಮಾನ ಮಾಡಬೇಕು. ಈದ್ಗಾ ಮೈದಾನ ಮುಸ್ಲಿಮರ ಜಾಗವಲ್ಲ, ಅವರು ವಿವಾದ ಮಾಡಬಾರದು. ಅವರಿಗೂ ವರ್ಷದಲ್ಲಿ ಎರಡು ಬಾರಿ ನಮಾಜ್‌ಗೆ ಅವಕಾಶವಿದೆ. ಅನಗತ್ಯ ವಿವಾದವನ್ನು ಸರ್ಕಾರ ಮೈಮೇಲೆ ಎಳೆದುಕೊಳ್ಳಬಾರದು‌” ಎಂದು ಸಲಹೆ ನೀಡಿದರು.

ಹೆಚ್ಚಿನ ಸುದ್ದಿ