KRGRV
Tuesday, November 3, 2026
Homeಜಿಲ್ಲಾ ಸುದ್ದಿಗಳುಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕು, ನಮ್ಮ ಸ್ವಾಭಿಮಾನ: ತಹಸೀಲ್ದಾರ್ ಸಿದ್ರಾಯಿ ಬೋಸಗಿ

ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕು, ನಮ್ಮ ಸ್ವಾಭಿಮಾನ: ತಹಸೀಲ್ದಾರ್ ಸಿದ್ರಾಯಿ ಬೋಸಗಿ

ಅಥಣಿ: ಕನ್ನಡ ಎನ್ನುವುದು ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಬದುಕು, ನಮ್ಮ ಸಂಸ್ಕೃತಿ, ನಮ್ಮ ಸ್ವಾಭಿಮಾನ, ಅದು ನಮ್ಮ ಅಸ್ತಿತ್ವವಾಗಿದೆ ಎಂದು ತಹಸೀಲ್ದಾರ್ ಸಿದ್ರಾಯಿ ಬೋಸಗಿ ಹೇಳಿದರು.

ಅಥಣಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,1956 ನವೆಂಬರ್ 1 ರಂದು ಕನ್ನಡ ಮಾತನಾಡುವ ವಿವಿಧ ಪ್ರದೇಶಗಳು ಒಂದಾಗಿ ವಿಶಾಲ ಮೈಸೂರು ರಾಜ್ಯ ಉದಯವಾಯಿತು. ನಂತರ 1973 ರಲ್ಲಿ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ನೀಡಲಾಯಿತು. ಈ ಐತಿಹಾಸಿಕ ಏಕೀಕರಣದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ ಒಂದರಂದು ನಾವು ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಹೆಮ್ಮೆಯಿಂದ ಆಚರಿಸುತ್ತೇವೆ.

ಕರ್ನಾಟಕವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ನಾಡು. ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರ ಸಾಮ್ರಾಜ್ಯದಂತಹ ಮಹಾನ್ ಸಾಮ್ರಾಜ್ಯಗಳು ನಮ್ಮ ನಾಡಿನ ಇತಿಹಾಸವನ್ನು ಶ್ರೀಮಂತಗೊಳಿಸಿದ್ದಾರೆ. ನಮ್ಮ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಕನ್ನಡ ಸಾಹಿತ್ಯದ ಹಿರಿಮೆಗೆ ಸಾಕ್ಷಿಯಾಗಿದೆ. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಸೇರಿದಂತೆ ಅನೇಕ ಮಹಾ ಸಾಹಿತಿಗಳು ಕನ್ನಡವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುವಾಗ ನಾಡಿನ ಸ್ವಾಭಿಮಾನಕ್ಕಾಗಿ ಹೋರಾಡಿದ ಮಹಾನ್ ವೀರರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ನಮ್ಮ ನಾಡಿನ ಸಾಹಸ ಹಾಗೂ ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ಅದೇ ರೀತಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ತಮ್ಮ ಅಪ್ರತಿಮ ದೇಶಭಕ್ತಿ ಹಾಗೂ ತ್ಯಾಗದಿಂದ ಇಂದಿಗೂ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಇಂತಹ ವೀರರನ್ನು ಹೊಂದಿರುವ ನಮ್ಮ ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮೆಲ್ಲರ ಹೆಮ್ಮೆಯ ವಿಷಯ.

ಅಥಣಿಯಂತಹ ನಮ್ಮ ಗಡಿ ಭಾಗದಲ್ಲಿರುವುದು ಅತ್ಯಂತ ವಿಶೇಷವಾದ ಪ್ರದೇಶವಾಗಿದೆ. ಇಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಜನರ ಪಾತ್ರ ಅಪಾರವಾಗಿದೆ. ವಿಶೇಷವಾಗಿ ಕರ್ನಾಟಕ ರತ್ನ ವೇದಿಕೆ, ಜೈ ಕರ್ನಾಟಕ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿ ವರ್ಷ ರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ.

ರಸ್ತೆಗಳಲ್ಲಿ, ಬೀದಿಗಳಲ್ಲಿ ಹಾರಾಡುವ ಹಳದಿ-ಕೆಂಪು ಧ್ವಜ ಕನ್ನಡಾಂಬೆಯ ಹೆಮ್ಮೆಯನ್ನು ಸಾರುತ್ತಿದೆ. ಈ ಗಡಿನಾಡಿನಲ್ಲಿ ಕನ್ನಡವನ್ನು ಉಳಿಸುವುದು ಕೇವಲ ಭಾಷೆಯನ್ನು ಮಾತನಾಡುವುದಲ್ಲ, ಕನ್ನಡದ ಬಗ್ಗೆ ಅಭಿಮಾನ, ಗೌರವ, ಪ್ರೀತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಿದೆ ಎಂದು ಅವರು ಹೇಳಿದರು.

ಅದೇ ರೀತಿಯಾಗಿ ಇವತ್ತು ನಮ್ಮ ಬಿಇಒ ಎಂ . ಆರ್.ಮುಂಜಿ ಅವರ ನೇತೃತ್ವದ ಶಿಕ್ಷಣ ಇಲಾಖೆ ಬಹಳಷ್ಟು ಕಾಳಜಿಯನ್ನು ವಹಿಸಿಕೊಂಡಿದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಶಿಕ್ಷಣ ಇಲಾಖೆಯ ಎಲ್ಲ ಸದಸ್ಯರ ಕೊಡುಗೆ ಅಪಾರವಾಗಿದೆ.

ವಿದ್ಯಾರ್ಥಿಗಳು ಅತ್ಯುತ್ತಮ ವೇಷಭೂಷಣಗಳನ್ನು ಮಾಡಿಕೊಂಡು, ಮೆರವಣಿಗೆ ಮೂಲಕ ತೆಗೆದುಕೊಂಡು ಬಂದು ಕನ್ನಡ ನಾಡು ನುಡಿಯನ್ನು ಮೆರೆಸಿದ್ದಾರೆ. ಇದಕ್ಕೆ ಕಾರಣರಾದ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳಿಗೆ ತಮಗೂ ಕೂಡ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.

ಅದೇ ರೀತಿ ನಿಮ್ಮ ಮಾತೃಭಾಷೆ ಕನ್ನಡದ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಕನ್ನಡದಲ್ಲಿ ಓದಿ, ಕನ್ನಡದಲ್ಲಿ ಬರೆಯಿರಿ, ಕನ್ನಡ ಸಾಹಿತ್ಯವನ್ನು ತಿಳಿದುಕೊಳ್ಳಿ. ಇಂಗ್ಲೀಷ್ ಸೇರಿದಂತೆ ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಬೇರೆ ಭಾಷೆಗಳನ್ನು ಕಲಿಯುವಾಗ ನಮ್ಮ ಕನ್ನಡವನ್ನು ಎಲ್ಲೂ ಮರೆಯಬಾರದು. ಎಲ್ಲ ಭಾಷೆಗಳನ್ನು ಗೌರವಿಸೋಣ, ನಮ್ಮ ಕನ್ನಡವನ್ನು ಹೃದಯದಿಂದ ಪ್ರೀತಿಸೋಣ ಎಂದು ಕರೆ ನೀಡಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ತಾಲೂಕು ಪಂಚಾಯತ್ ಅಥಣಿ ಹಾಗೂ ಉಪ ಕಾರ್ಯಾದರ್ಶಿಗಳು ಬಸವರಾಜ ಹೆಗ್ಗನಾಯಾಕ್, ಅಥಣಿ ಉಪ ವಿಭಾಗ ಆರಕ್ಷಕ ಉಪ ಅಧೀಕ್ಷಕರು ವೀರೇಂದ್ರ ಕುಮಾರ ಪಿ. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಆರ್. ಮುಂಜಿ,ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಅಥಣಿ ಪುರಸಭೆ ಪ್ರಭಾರ ಮುಖ್ಯ ಅಧಿಕಾರಿ ದಯಾ ಜೋಶಿ, ಸಿಪಿಐ. ಸಂತೋಷ್ ಹಳ್ಳೂರ, ಸಿಪಿಐ ಎಲ್. ಬೀ. ಅಗ್ನಿ, ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಹುಣಸಿಕಟ್ಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಶುರಾಮ ಪತ್ತಾರ, ನೌಕರ ಸಂಘದ ಅಧ್ಯಕ್ಷ ರಾಮಗೊಂಡ ಪಾಟಿಲ, ತಾಲೂಕ ವೈದ್ಯಾಧಿಕಾರಿ,ಬಸಗೌಡ ಕಾಗೆ,ಸಂತೋಷ ಬೈನಾಯಕ್, ಎಂ.ಎಂ.ಮಿರ್ಜಿ,ರಾವಸಾಬ್ ಐಹೊಳೆ,ಸಂತೋಷ ಸಾವಡಕರ,ರಾಮನ್ ಗೌಡ ಪಾಟಿಲ, ರಾಜು ಗುಡೋಡಗಿ , ರಿಯಾಜ್ ಸನದಿ, ಬಸವರಾಜ್ ನಾಯಕ, ಬಾಬು ಖೇಮಲಾಪುರ,ಶಬ್ಬೀರ್ ಸಾತಬಚ್ಚೆ, ಉದಯ ಮಕಾಣಿ , ಸುಂದರ ಸೌದಾಗರ,ಆಕಾಶ ನಂದಗಾಂವ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮತ್ತು ಶಿಕ್ಷಕ ವೃಂದದವರು, ಅಧಿಕಾರಿಗಳು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ