ಬೆಂಗಳೂರು:
ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರ ಹಿತ ಕಾಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು: ಕಬ್ಬಿನ ನ್ಯಾಯಯುತ ಬೆಲೆ, ಎಥೆನಾಲ್ ದರ ಹೆಚ್ಚಳ ಸೇರಿದಂತೆ ಐದು ಪ್ರಮುಖ ಬೇಡಿಕೆಗಳಿಗೆ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಮಾನ್ಯ ಡಿ.ಕೆ ಶಿವಕುಮಾರ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗುವುದು ವಿಳಂಬವಾಗುತ್ತಿರುವುದರಿಂದ ಸಾವಿರಾರು ಕಬ್ಬು ಬೆಳೆಗಾರರ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ. ಕಟಾವಿಗೆ ಸಿದ್ಧವಾಗಿರುವ ಕಬ್ಬು ಇನ್ನೂ ಹೊಲದಲ್ಲೇ ನಿಂತಿದ್ದು, ದಿನಗಳು ಕಳೆದಂತೆ ಕಬ್ಬಿನ ತೂಕ ಹಾಗೂ ಸಕ್ಕರೆ ಅಂಶ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುವ ಆತಂಕ ಎದುರಾಗಿದೆ.
ಇತ್ತೀಚೆಗೆ ಕಿತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಭಟನಾ ನಿರತ ಕಬ್ಬು ಬೆಳೆಗಾರರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ರೈತರ ಸಂಕಷ್ಟವನ್ನು ಅರ್ಥಮಾಡಿಕೊಂಡಿದ್ದು, ಅವರ ಜೀವನೋಪಾಯವನ್ನು ರಕ್ಷಿಸಲು ಸೂಕ್ತ ಹಾಗೂ ತ್ವರಿತ ಕ್ರಮಗಳ ಅಗತ್ಯವಿದೆ ಎಂದು ತಿಳಿಸಿದ್ದೇನೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಪ್ರಮುಖ ಬೇಡಿಕೆಗಳ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.
ಕಬ್ಬು ಬೆಳೆಗಾರರ 5 ಪ್ರಮುಖ ಬೇಡಿಕೆಗಳು
- ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಳಕ್ಕೆ ಆಗ್ರಹ
2019ರಿಂದ ಪ್ರತಿ ಕೆ.ಜಿ. ಸಕ್ಕರೆಗೆ ₹31ರ ಕನಿಷ್ಠ ಮಾರಾಟ ಬೆಲೆ ಮುಂದುವರಿದಿದೆ. ಕಬ್ಬು ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ನ್ಯಾಯಯುತ ಬೆಲೆ ಪಾವತಿಸಲು ನೆರವಾಗಲಿದೆ ಎಂಬುದು ಪ್ರಮುಖ ಬೇಡಿಕೆಯಾಗಿದೆ. - ಗೃಹಬಳಕೆ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ MSP ನಿಗದಿ
ಸಾಮಾನ್ಯ ಕುಟುಂಬಗಳ ಬಳಕೆಗೆ ಬೇಕಾಗುವ ಸಕ್ಕರೆ ಮತ್ತು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಸುವ ಸಕ್ಕರೆಗೆ ಪ್ರತ್ಯೇಕ ಕನಿಷ್ಠ ಮಾರಾಟ ಬೆಲೆ ನಿಗದಿಪಡಿಸಬೇಕು. - ಇದರಿಂದ ಗೃಹಬಳಕೆದಾರರ ಹಿತವನ್ನು ಕಾಪಾಡುವುದರ ಜೊತೆಗೆ ವಾಣಿಜ್ಯ ಖರೀದಿದಾರರಿಗೂ ಸೂಕ್ತ ಬೆಲೆ ವ್ಯವಸ್ಥೆ ರೂಪಿಸಬಹುದು ಎಂದು ಮನವಿ ಮಾಡಲಾಗಿದೆ.
- ಕಬ್ಬಿನ ರಸ, ಸಕ್ಕರೆ ಸಿರಪ್ ಮತ್ತು B-ಹೆವಿ ಮೊಲಾಸಸ್ನಿಂದ ಉತ್ಪಾದಿಸುವ ಎಥೆನಾಲ್ಗೆ ನ್ಯಾಯಯುತ ಅವಕಾಶ
ಕಬ್ಬಿನ ರಸ, ಸಕ್ಕರೆ ಸಿರಪ್ ಹಾಗೂ B-ಹೆವಿ ಮೊಲಾಸಸ್ನಿಂದ ಉತ್ಪಾದಿಸುವ ಎಥೆನಾಲ್ಗೆ ಸಂಬಂಧಿಸಿದ ಖರೀದಿ ಟೆಂಡರ್ಗಳಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಮರುಪರಿಶೀಲಿಸಬೇಕು. ಸಕ್ಕರೆ ಕಾರ್ಖಾನೆಗಳ ಸ್ಥಾಪಿತ ಉತ್ಪಾದನಾ ಸಾಮರ್ಥ್ಯಕ್ಕೆ ಅನುಗುಣವಾಗಿ ಎಥೆನಾಲ್ ಖರೀದಿ ಅವಕಾಶವನ್ನು ನ್ಯಾಯಯುತವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. - ಕಬ್ಬು ಆಧಾರಿತ ಎಥೆನಾಲ್ ಬೆಲೆ ಹೆಚ್ಚಳ
2022–23ರಿಂದ ಕಬ್ಬು ಆಧಾರಿತ ಎಥೆನಾಲ್ನ ಬೆಲೆಗಳಲ್ಲಿ ಪರಿಷ್ಕರಣೆ ಆಗಿಲ್ಲ ಎಂಬ ಅಂಶವನ್ನು ಪ್ರಸ್ತಾಪಿಸಲಾಗಿದೆ. ಕಬ್ಬಿನ ಉತ್ಪಾದನಾ ವೆಚ್ಚ ಮತ್ತು ಇತರ ವೆಚ್ಚಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಎಥೆನಾಲ್ ಬೆಲೆಯನ್ನು ಹೆಚ್ಚಿಸಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಸುಧಾರಿಸಿ, ರೈತರಿಗೆ ಕಬ್ಬಿನ ಹಣ ಪಾವತಿಸಲು ನೆರವಾಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. - FRP ಮೂಲ ಸಕ್ಕರೆ ಚೇತರಿಕೆ ದರವನ್ನು ಶೇ.9.50ಕ್ಕೆ ಮರುಸ್ಥಾಪನೆ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುವಾಗ ಬಳಸುವ FRP (Fair and Remunerative Price) ವ್ಯವಸ್ಥೆಯಲ್ಲಿ ಮೂಲ ಸಕ್ಕರೆ ಚೇತರಿಕೆ ದರವನ್ನು ಶೇ.9.50ಕ್ಕೆ ಮರುಸ್ಥಾಪಿಸಬೇಕು ಎಂದು ಮನವಿ ಮಾಡಲಾಗಿದೆ. ಮಣ್ಣು, ಹವಾಮಾನ ಮತ್ತು ಕಬ್ಬು ನುರಿಸುವ ಪರಿಸ್ಥಿತಿಗಳಲ್ಲಿನ ವ್ಯತ್ಯಾಸದಿಂದ ಕಡಿಮೆ ಸಕ್ಕರೆ ಚೇತರಿಕೆ ದರ ಹೊಂದಿರುವ ಪ್ರದೇಶಗಳ ರೈತರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ಈ ಬೇಡಿಕೆಯ ಉದ್ದೇಶವಾಗಿದೆ.
ರೈತರ ಹಿತಕ್ಕಾಗಿ ರಾಜ್ಯ ಸರ್ಕಾರದ ಕೈಗೊಂಡ ಕ್ರಮಗಳು
ಕಬ್ಬಿನ ತೂಕದಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಸಕ್ಕರೆ ಚೇತರಿಕೆ ಪ್ರಮಾಣದ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ರೈತರಿಗೆ ಹೆಚ್ಚುವರಿ ಆರ್ಥಿಕ ನೆರವು ನೀಡುವುದು ಸೇರಿದಂತೆ ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಸಕ್ಕರೆ ವಲಯದ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿರುವುದನ್ನೂ ಸ್ವಾಗತಿಸಲಾಗಿದೆ. ಆದರೆ ಕಬ್ಬು ನುರಿಸುವ ಹಂಗಾಮು ಈಗಾಗಲೇ ವಿಳಂಬವಾಗಿರುವುದರಿಂದ, ಸಮಿತಿಯ ಪರಿಶೀಲನೆ ಮುಂದುವರಿದರೂ ರೈತರ ತುರ್ತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶೀಘ್ರ ನಿರ್ಧಾರ ಕೈಗೊಳ್ಳಬೇಕಾಗಿದೆ.
ಕೇಂದ್ರ ಸರ್ಕಾರಕ್ಕೆ ಸಿಎಂ ಮನವಿ..
ಲಕ್ಷಾಂತರ ಕಬ್ಬು ಬೆಳೆಗಾರರ ಜೀವನೋಪಾಯ ಮತ್ತು ಅವರ ಕುಟುಂಬಗಳ ಭವಿಷ್ಯ ಈ ಸಮಸ್ಯೆಗಳ ಪರಿಹಾರವನ್ನು ಅವಲಂಬಿಸಿದೆ. ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಂತೆ ಮಾಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ.
ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಐದು ಪ್ರಮುಖ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಕಬ್ಬು ನುರಿಸುವ ಹಂಗಾಮು ಮತ್ತಷ್ಟು ವಿಳಂಬವಾಗದಂತೆ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ರೈತರ ಹಿತಾಸಕ್ತಿ ಮತ್ತು ಕರ್ನಾಟಕದ ಜನರ ಕಲ್ಯಾಣವೇ ನಮ್ಮ ಮೊದಲ ಆದ್ಯತೆ ಎಂಬ ಸಂದೇಶವನ್ನು ನಮ್ಮ ಸಿಎಂ ಅವರು ನೀಡಿದ್ದಾರೆ.
ಸಂಪಾದಕರು: ರಾಮಚಂದ್ರಪ್ಪ ಪೂಜೇರ

