KRGRV
Friday, August 7, 2026
Homeಕ್ರೀಡೆಕಾಮನ್‍ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಪ್ಯಾರಾ ಅಥ್ಲೀಟ್ ಕೆ.ಎಸ್ ಶಿಲ್ಪಾಗೆ 15 ಲಕ್ಷ ನಗದು...

ಕಾಮನ್‍ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಪ್ಯಾರಾ ಅಥ್ಲೀಟ್ ಕೆ.ಎಸ್ ಶಿಲ್ಪಾಗೆ 15 ಲಕ್ಷ ನಗದು ಬಹುಮಾನ ಹಾಗೂ ಸರ್ಕಾರಿ ಗ್ರೂಪ್ ಬಿ ಹುದ್ದೆ

ಬೆಂಗಳೂರು, ಆಗಸ್ಟ್ 06, : ಗ್ಲಾಸ್ಗೋನಲ್ಲಿ ನಡೆದ 2026 ರ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಶಾರ್ಟ್ ಪುಟ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ದೇಶಕ್ಕೆ ಹಾಗೂ ನಮ್ಮ ಕರ್ನಾಟಕಕ್ಕೆ ಕೀರ್ತಿ ತಂದಿರುವ ಕೆ.ಎಸ್ ಶಿಲ್ಪಾ ಅವರು ಈ ನಾಡಿನ ಸಾವಿರಾರು ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಗೋವಿಂದರಾಜು ಅವರು ಹರ್ಷ ವ್ಯಕ್ತಪಡಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಇಂದು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತರಾದ ಕೆ.ಎಸ್ ಶಿಲ್ಪಾ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ವಿಜೇತರು ತಾಯಿ ನಾಡಿಗೆ ಆಗಮಿಸಿದಾಗ ಈ ರೀತಿಯ ಗೌರವ ಸಲ್ಲಿಸುವ ಮೂಲಕ ಕರ್ನಾಟಕ ಕ್ರೀಡಾ ಇಲಾಖೆ ಕ್ರೀಡಾ ಪಟುಗಳಲ್ಲಿ ಸ್ಪೂರ್ತಿ ತುಂಬಿದೆ ಎಂದರು.

ಈಗಾಗಲೇ ಕ್ರೀಡಾ ಇಲಾಖೆ ಓಲಂಪಿಕ್ಸ್ ಪದಕ ಗೆದ್ದವರಿಗೆ ಮೊದಲ ನಗದು ಬಹುಮಾನ 6 ಕೋಟಿ ರೂ, ಎರಡನೆ ಸ್ಥಾನ ಪಡೆದವರಿಗೆ 5 ಕೋಟಿ ಹಾಗೂ ತೃತೀಯ ಸ್ಥಾನಕ್ಕೆ 3 ಕೋಟಿ ರೂ ಬಹುಮಾನ ಘೋಷಿಸಿದೆ ಜೊತೆಗೆ ಸರ್ಕಾರಿ ಹುದ್ದೆಯನ್ನು ಸಹ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಶಸ್ತಿ ವಿಜೇತರಿಗೆ ಅನೇಕ ಆಕರ್ಷಕ ಕೊಡುಗೆಗಳನ್ನು ಕರ್ನಾಟಕ ರಾಜ್ಯ ಘೋಷಿಸಿದೆ.

ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ತಂದ ಮೊದಲ ರಾಜ್ಯ ಕರ್ನಾಟಕವಾಗಿದೆ. ಹೆಚ್ಚಿನ ಯುವಕ ಯುವತಿಯರು ಕ್ರೀಡೆಯಲ್ಲಿ ಹೆಚ್ಚಿನ ಶ್ರಮ ಪಟ್ಟು ಗೆಲ್ಲುವ ಮೂಲಕ ದೇಶಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಮಾತನಾಡಿ, ಇಂದು ಈ ಚಿಕ್ಕ ಕಾರ್ಯಕ್ರಮ ಕ್ರೀಡಾಪಟುಗಳಿಗೆ ನವ ಚೈತನ್ಯ ತುಂಬಲಿದೆ, ಶಿಲ್ಪ ಕೆ.ಎಸ್. ಅವರ ಈ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಈಗಾಗಲೇ ಗ್ಲಾಸ್ಗೋನಲ್ಲಿ ನಡೆದ 2026 ರ ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ 8 ಜನರಿಗೆÉ ಸರ್ಕಾರದವತಿಯಿಂದ ತಲಾ 5 ಲಕ್ಷ ರೂ. ನೀಡಲಾಗಿದೆ.

ಪ್ಯಾರಾ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿರುವ ಶಿಲ್ಪ್ಪಾ ಕೆ.ಎಸ್. ಅವರಿಗೆ ಕಂಚು 15 ಲಕ್ಷ ನಗದು ಬಹುಮಾನ ಹಾಗೂ ಸರ್ಕಾರದ ಗ್ರೂಪ್ ಬಿ ಹುದ್ದೆ ನೀಡಿ ಗೌರವಿಸಲಾಗುವುದು. ಇನ್ನುಳಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು. ಶೀಘ್ರದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ಶಿಲ್ಪ ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಕ್ರೀಡಾಪಟು ಶಿಲ್ಪಾ ಕೆ.ಎಸ್ ಅವರು ಮಾತನಾಡಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಬಂದಿರುವುದು ತುಂಬಾ ಖುಷಿಯಾಗಿದೆ ಈ ರೀತಿಯ ಸ್ವಾಗತ ನೀಡಿ ಸನ್ಮಾನಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದಗಳು ಎಂದು ಹರ್ಷ ವ್ಯಕ್ತಪಡಿಸಿದರು.

ಈ ನನ್ನ ಸಾಧನೆಗೆ ನನ್ನ ಕೋಚ್‍ಗಳು ಮುಖ್ಯ ಕಾರಣ, ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಪ್ರತಿಯೊಬ್ಬರು ಶ್ರಮಪಟ್ಟಲ್ಲಿ ಸಾಧನೆ ಗ್ಯಾರಂಟಿ, ನಮ್ಮಂತ ಕ್ರೀಡಾಪಟುಗಳಿಗಾಗಿ ಸರ್ಕಾರ ಸಹ ಅನೇಕ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ, ಇದರಿಂದ ಅನೇಕರು ಸಾಧನೆಗೆ ದುಮುಕುವಂತೆ ಹುರಿದುಂಬಿಸುತ್ತದೆ. ಕಷ್ಟ ಪಟ್ಟರೆ ಪ್ರತಿಫಲ ಗ್ಯಾರಂಟಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯ ತರುಬೇತುದಾರ ರಾಘವೇಂದ್ರ ಸೇರಿದಂತೆ ಸಹಾಯಕ ತರುಬೇತುದಾರ ಸತ್ಯ ನಾರಾಯಣ ಹಾಗೂ ಪುಷ್ಪ ನಿರಂಜನ ಪ್ರಸಾದ್ ಅವರನ್ನು ಸಹ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಅಂತರರಾಷ್ಟ್ರೀಯ ಕೋಚ್ ಎಸ್ ಡಿ ಈಶನ್, ಕ್ರೀಡಾಪಟುಗಳಾದ ಎಮ್ ಮಹಾದೇವ್, ಅರ್ಜುನ್ ಹಾಲಪ್ಪ ಸೇರಿದಂತೆ ಅನೇಕ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ವಿಶೇಷ ಚೇತನರ ಇಲಾಖೆಯಿಂದ ಹಾಗೂ ಮೈಸೂರು ಕ್ರೀಡಾ ವಿಭಾಗದ ವತಿಯಿಂದ ಕೆ.ಎಸ್ ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅನೇಕ ಜನಪದ ಕಲಾತಂಡಗಳು ಕೆ.ಎಸ್ ಶಿಲ್ಪಾ ಅವರಿಗೆ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ: ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಪ್ಯಾರಾ ಅಥ್ಲೀಟ್ ಶಿಲ್ಪಾ ಅವರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಟರ್ಮಿನಲ್–1 ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.

ಹೆಚ್ಚಿನ ಸುದ್ದಿ