KRGRV
Tuesday, September 29, 2026
Homeಜಿಲ್ಲಾ ಸುದ್ದಿಗಳುಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಗೆ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ

“ರೈತರು ಬೇರೆ ಕಾರ್ಖಾನೆಗಳಿಗೆ ಕಬ್ಬು ಕಳುಹಿಸದೆ ಕೃಷ್ಣಾ ಕಾರ್ಖಾನೆಗೆ ಆದ್ಯತೆ ನೀಡಿ” – ಪರಪ್ಪ ಸವದಿ

ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 2026-27ನೇ ಸಾಲಿನ 25ನೇ ಬಾಯ್ಲರ್ ಪ್ರದೀಪನ ಸಮಾರಂಭವು ಕಾರ್ಖಾನೆ ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಪ್ರಸಕ್ತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕಬ್ಬಿನ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ ಕಬ್ಬು ನುರಿಸುವ ವಿಷಯದಲ್ಲಿ ವಿವಿಧ ಕಾರ್ಖಾನೆಗಳ ನಡುವೆ ಪೈಪೋಟಿ ಆರಂಭವಾಗಿದೆ. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಕಾರ್ಖಾನೆಯಾಗಿದ್ದು, ಅದನ್ನು ಬೆಳೆಸಿ ಉಳಿಸುವ ಜವಾಬ್ದಾರಿ ಎಲ್ಲ ರೈತರು ಹಾಗೂ ಸದಸ್ಯರ ಮೇಲಿದೆ ಎಂದು ಹೇಳಿದರು.

“ಕಬ್ಬು ನುರಿಸಲು ನಾಲ್ಕು ದಿನ ತಡವಾದರೂ ಪರವಾಗಿಲ್ಲ; ರೈತರು ತಮ್ಮ ಕಬ್ಬನ್ನು ಕೃಷ್ಣಾ ಕಾರ್ಖಾನೆಗೆ ನೀಡಬೇಕು. ಕಷ್ಟ-ಸುಖದ ಸಂದರ್ಭದಲ್ಲಿ ಖಾಸಗಿ ಕಾರ್ಖಾನೆಗಳು ರೈತರೊಂದಿಗೆ ನಿಲ್ಲುವುದಿಲ್ಲ. ಆದರೆ ಕೃಷ್ಣಾ ಕಾರ್ಖಾನೆ ತನ್ನ ಸದಸ್ಯರು ಹಾಗೂ ರೈತರ ಸುಖ-ದುಃಖಗಳಲ್ಲಿ ಸದಾ ಭಾಗಿಯಾಗುತ್ತದೆ” ಎಂದು ಪರಪ್ಪ ಸವದಿ ಹೇಳಿದರು.

ಕಳೆದ ಅವಧಿಯಲ್ಲಿ ರೈತರಿಗೆ ಬಿಲ್ ಪಾವತಿಸುವಲ್ಲಿ ಕಾರ್ಖಾನೆ ಆದ್ಯತೆ ನೀಡಿದ್ದು, ಈ ಬಾರಿಯೂ ಸಹ ಅದೇ ರೀತಿಯಲ್ಲಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರಸಕ್ತ ಹಂಗಾಮಿನಲ್ಲಿ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು, ಉತ್ತಮ ರಿಕವರಿ ನೀಡುವ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗೆ ಪೂರೈಸುವ ಮೂಲಕ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಖಾನೆಯ ಪ್ರಾಸ್ತಾವಿಕವಾಗಿ ಮಾತನಾಡಿದ ಗೂಳಪ್ಪ ಜತ್ತಿ, ಕಳೆದ ವರ್ಷ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿ ಸಹಕರಿಸಿದ್ದಾರೆ. ಇದರ ಪರಿಣಾಮವಾಗಿ ಹಿಂದೆ ಇದ್ದ ಸುಮಾರು 30 ಕೋಟಿ ನಷ್ಟವು 14 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಮುಂದಿನ ಅವಧಿಯಲ್ಲಿ ಉತ್ತಮ ರಿಕವರಿ ನೀಡುವ ಕಬ್ಬನ್ನು ಕಾರ್ಖಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಸಿದರೆ, ಉಂಟಾಗಿರುವ ನಷ್ಟವನ್ನು ಸರಿದೂಗಿಸಿ ಕಾರ್ಖಾನೆಯನ್ನು 20 ಕೋಟಿಗೂ ಅಧಿಕ ಲಾಭದತ್ತ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರೈತರು ಹಾಗೂ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ನಂತರ ಪ.ಪೂ. ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಹಾಗೂ ಕವಲಗುಡ್ಡ ಅಮರೇಶ್ವರ ಮಹಾರಾಜರು, ಮ . ನಿ.ಪ್ರ.ಗುರು ಸಿದ್ದ ಮಹಾ ಸ್ವಾಮಿಜಿ ಯವರು ಆಶೀರ್ವಚನ ನೀಡಿ, ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸುವ ಮೂಲಕ ಕಾರ್ಖಾನೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸಿ ಬೆಳೆಸುವುದು ರೈತರಷ್ಟೇ ಅಲ್ಲದೆ, ಕಾರ್ಖಾನೆ ಸದಸ್ಯರು, ಕಾರ್ಮಿಕರು ಹಾಗೂ ಆಡಳಿತ ಮಂಡಳಿಯ ಎಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸುವ ಮೂಲಕ ಕಾರ್ಖಾನೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಸುರೇಶ್ ಟಕ್ಕಣ್ಣವರ ಸ್ವಾಗತಿಸಿ, ವಂದಿಸಿದರು.

ಸಭೆಯಲ್ಲಿ ಹಿರಿಯರಾದ ಶ್ರೀಶೈಲಿ ನಾರಗೊಂಡ, ಸಂಜಯ ನಾಡಗೌಡ, ಎಸ್.ಎ. ವಾಗಮೋಡೆ, ಜಿ.ಎಂ. ತೇವರಮನಿ, ಎಸ್.ಡಿ. ನಂದೀಶ್ವರ, ಜಿ.ಎಂ. ಜತ್ತಿ, ಎಸ್.ಜೆ. ಪಾಟೀಲ, ಡಿ.ಎಸ್. ಕುಲಕರ್ಣಿ, ಎಸ್.ಎಸ್. ನಾಯಿಕ, ಎಂ.ಎಂ. ಗೊಟಕಿಂಡಿ, ಎಸ್.ಎಚ್. ನಾಯಿಕ, ಆರ್.ಎ. ಪಟ್ಟಣ, ಎಚ್.ಐ. ಜಗದೇವ, ಪಿ.ಸಿ. ಪಾಟೀಲ, ವಿ.ಎಂ. ಪಾಟೀಲ, ಜಿ.ಎಂ. ಪಾಟೀಲ, ಮಲ್ಲೇಶ್ ಮಲಕಾರಿ, ರಮೇಶ್ ಸವದಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ರೈತರು ಹಾಗೂ ಕಾರ್ಖಾನೆ ಸಿಬ್ಬಂದಿ ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ