ಎಸ್ಐಆರ್ ಹೆಸರಿನಲ್ಲಿ ಅರ್ಹ ಮತದಾರರ ಹೆಸರು ತೆಗೆಯಲು ಮುಂದಾಗಿರುವ ಬಿಜೆಪಿಗರ ವಿರುದ್ಧ ವಾಗ್ದಾಳಿ
ರಾಹುಲ್ ಗಾಂಧಿ ಅವರು ಈ ಹಿಂದೆ ವೋಟ್ ಚೋರಿ ಬಗ್ಗೆ ಧ್ವನಿ ಎತ್ತಿ ಎಚ್ಚರಿಸಿದ್ರು
ರಾಜ್ಯ ಬಿಜೆಪಿಯ ಮನೆಗೆ ಒಂದು ಬಾಗಿಲಲ್ಲ, ನೂರು ಬಾಗಿಲು’
ಕೊಪ್ಪಳ, ಅ.2: ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯನ್ನು ಬಳಸಿಕೊಂಡು ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನ ನಡೆದಿದ್ದು, ಬಿಜೆಪಿಗರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ನಡೆದ ಕೆಪಿಸಿಸಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಸಚಿವರು, ಯಾವುದೇ ಮತದಾರರ ಹೆಸರಿನ ಬಗ್ಗೆ ಆಕ್ಷೇಪವಿದ್ದರೆ ನಿಯಮಾನುಸಾರ ಮತದಾರರ ಸ್ವ-ವಿವರ ಒಳಗೊಂಡ ನಮೂನೆ–7ರ ಮೂಲಕ ಮಾಹಿತಿ ನೀಡಬಹುದಾಗಿತ್ತು. ಆದರೆ ಸಾವಿರಾರು ನಮೂನೆ–7ನ್ನು ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕ್ರಿಯೆಯ ಹಿಂದೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯ ಕೈವಾಡವಿದೆ. ನಮೂನೆ- 7ನ್ನು ಅಲ್ಲಿಂದಲೇ ಭರ್ತಿ ಮಾಡಿ ಕಳುಹಿಸಲಾಗಿದೆ ಎಂದು ಆರೋಪಿಸಿದರು.
ವಿಜಯಪುರದ ವಿಧಾನಸಭಾ ಕ್ಷೇತ್ರವೊಂದರಲ್ಲಿ ಸುಮಾರು 13 ಸಾವಿರ ಮತಗಳು, ಬಳ್ಳಾರಿಯಲ್ಲಿ 7,061, ಬಬಲೇಶ್ವರದಲ್ಲಿ 1,365, ಬಾಲ್ಕಿಯಲ್ಲಿ 3,200 ಹಾಗೂ ಕೊಪ್ಪಳದ ಯಲಬುರ್ಗಾ ಕ್ಷೇತ್ರದಲ್ಲಿ 540 ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ. ಈ ಬಗ್ಗೆ ಚುನಾವಣಾ ವ್ಯವಸ್ಥೆ ಪಾರದರ್ಶಕವಾಗಿ ಪರಿಶೀಲಿಸಿ, ಸಾರ್ವಜನಿಕರಲ್ಲಿರುವ ಅನುಮಾನಗಳಿಗೆ ಉತ್ತರ ನೀಡಬೇಕು ಎಂದು ಸಚಿವರು ಆಗ್ರಹಿಸಿದರು.
ರಾಹುಲ್ ಗಾಂಧಿ ಹಿಂದೆಯೇ ವೋಟ್ ಚೋರಿ ಬಗ್ಗೆ ಧ್ವನಿ ಎತ್ತಿದ್ರು: ನಮ್ಮ ನಾಯಕರಾದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ವೋಟ್ ಚೋರಿ ಬಗ್ಗೆ ದಾಖಲೆ ಸಮೇತ ಧ್ವನಿ ಎತ್ತಿದ್ದರು. ಆಗ ಬಿಜೆಪಿ ನಾಯಕರು ನೂರು ಚುನಾವಣೆ ಸೋತಿರುವ ನಾಯಕ ಎಂದು ಲೇವಡಿ ಮಾಡಿದ್ದರು. ಆದರೆ ರಾಹುಲ್ ಗಾಂಧಿ ಅವರು, ಪ್ರಜಾಪ್ರಭುತ್ವದ ಉಳಿವಿಗಾಗಿ ನೂರಲ್ಲ, ಇನ್ನೂರು ಚುನಾವಣೆ ಕೂಡ ಸೋಲುತ್ತೇನೆ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ತಂಗಡಗಿ ನೆನೆದರು.
‘ರಾಹುಲ್ ಗಾಂಧಿ–ಮೋದಿ ಮುಖಾಮುಖಿ ಪ್ರಶ್ನೋತ್ತರ ನಡೆಯಲಿ’*: ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಮಾಧ್ಯಮದವರು ಪ್ರಶ್ನೆಗಳನ್ನು ಕೇಳಲಿ. ಯಾರು ತಮ್ಮ ನಿಲುವುಗಳಿಗೆ ಗಟ್ಟಿಯಾಗಿ ಉತ್ತರ ನೀಡುತ್ತಾರೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಸಚಿವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ‘ಬಿಜೆಪಿಯವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರದ್ದು ಮನೆ ಒಂದು, ಮೂರು ಬಾಗಿಲು ಅಲ್ಲ; ಮನೆ ಒಂದು, ಬಾಗಿಲು ನೂರಾಗಿದೆ. ಯಾರು ಯಾವ ಬಾಗಿಲಿನಿಂದ ಹೊರಗೆ ಬರುತ್ತಾರೆ ಎಂಬುದೇ ಗೊತ್ತಾಗದ ಪರಿಸ್ಥಿತಿ’ ಎಂದು ಲೇವಡಿ ಮಾಡಿದರು.
ಬಾಕ್ಸ್
‘ಮನ್ ಕೀ ಬಾತ್ನಲ್ಲಿ ಎಲ್ಲವೂ ಮುಗಿಸುತ್ತಾರೆ’:
ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಹಸಿರು ಕ್ರಾಂತಿ, ಬ್ಯಾಂಕ್ಗಳ ರಾಷ್ಟ್ರೀಕರಣ ಹಾಗೂ ಆಹಾರ ಭದ್ರತೆಯಂತಹ ಮಹತ್ವದ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ನಾಯಕರು ಕೇವಲ ಪ್ರಚಾರದಲ್ಲೇ ಕಾಲ ಕಳೆಯುತ್ತಿದ್ದಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ‘ಚಲೋ ಡ್ರೆಸ್ ಹಾಕಿಕೊಂಡು, ಮನ್ ಕೀ ಬಾತ್ನಲ್ಲಿ ಎಲ್ಲವನ್ನೂ ಮುಗಿಸುತ್ತಾರೆ. ಮಾಧ್ಯಮದವರ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ಅವರಿಗಿಲ್ಲ. ಈ ದೇಶಕ್ಕೆ ತಮ್ಮ ಕೊಡುಗೆ ಏನು ಎಂದು ಬಿಜೆಪಿಗರನ್ನು ಪ್ರಶ್ನಿಸಿದರೆ ಮೋದಿ ಅವರನ್ನು ನೀಡಿದ್ದೇವೆ ಎನ್ನುತ್ತಾರೆ. ಮೋದಿ ಅವರ ಕೊಡುಗೆ ಬಗ್ಗೆ ಕೇಳಿದ್ರೆ, ಇಡೀ ಜಗತ್ತು ಸುತ್ತಿದ್ದೇನೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

