KRGRV
Saturday, October 3, 2026
Homeಜಿಲ್ಲಾ ಸುದ್ದಿಗಳುಮಾದಕ ವಸ್ತುಗಳ ಪೆಡ್ಲರ್‌ಗಳ ಪರೇಡ್: ಮಾದಕ ವಸ್ತು ಮಾರಾಟಕ್ಕೆ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

ಮಾದಕ ವಸ್ತುಗಳ ಪೆಡ್ಲರ್‌ಗಳ ಪರೇಡ್: ಮಾದಕ ವಸ್ತು ಮಾರಾಟಕ್ಕೆ ಪೊಲೀಸ್ ಆಯುಕ್ತರ ಖಡಕ್ ಎಚ್ಚರಿಕೆ

ಕಲಬುರಗಿ: ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಸೇವನೆಯಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಇಂದು ಮಾದಕ ವಸ್ತುಗಳ ಅಕ್ರಮ ಮಾರಾಟಗಾರರು (ಪೆಡ್ಲರ್‌)ಗಳ ಪರೇಡ್ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟದಲ್ಲಿ ತೊಡಗಿರುವವರನ್ನು ಕರೆಸಿ, ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಿಂದ ದೂರ ಉಳಿದು ಉತ್ತಮ ಹಾಗೂ ಸುಂದರ ಜೀವನ ನಡೆಸುವಂತೆ ಪೊಲೀಸ್ ಇಲಾಖೆ ವತಿಯಿಂದ ತಿಳಿವಳಿಕೆ ನೀಡಲಾಯಿತು.

ಮಾದಕ ವಸ್ತುಗಳ ವ್ಯಸನದಿಂದ ವ್ಯಕ್ತಿಯ ಆರೋಗ್ಯ ಹಾಗೂ ಕುಟುಂಬ ಜೀವನದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ, ಸಮಾಜದ ಸ್ವಾಸ್ಥ್ಯಕ್ಕೂ ಹಾನಿಯಾಗುತ್ತದೆ. ಹೀಗಾಗಿ ಇಂತಹ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಿದ್ದು, ಆರೋಗ್ಯಕರ ಮತ್ತು ಜವಾಬ್ದಾರಿಯುತ ಜೀವನ ನಡೆಸುವಂತೆ ಪೊಲೀಸರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐಪಿಎಸ್, ಅವರು, ಮಾದಕ ವಸ್ತುಗಳ ಅಕ್ರಮ ಮಾರಾಟವು ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರು ತಕ್ಷಣವೇ ಅದನ್ನು ಕೈಬಿಡಬೇಕು ಎಂದು ಎಚ್ಚರಿಸಿದರು.

ಮುಂದೆ ಯಾರಾದರೂ ಮಾದಕ ವಸ್ತುಗಳ ಮಾರಾಟ ಅಥವಾ ಇತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ಸ್ಪಷ್ಟ ಎಚ್ಚರಿಕೆ ನೀಡಿದರು.

ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಪೊಲೀಸ್ ಇಲಾಖೆ ನಿರಂತರವಾಗಿ ಕ್ರಮ ಕೈಗೊಳ್ಳುತ್ತಿದ್ದು, ಯುವಕರು ಹಾಗೂ ಸಾರ್ವಜನಿಕರು ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ಹೆಚ್ಚಿನ ಸುದ್ದಿ