ಬೆಂಗಳೂರು, ಅಕ್ಟೋಬರ್ 23: ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಪೋಸ್ಟ್ಗಳ ಆಧಾರದ ಮೇಲೆ ಸಮರ್ಪಕ ಪರಿಶೀಲನೆ ಇಲ್ಲದೆ ಎಫ್ಐಆರ್ ದಾಖಲಿಸುವುದು ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸುವ ಕ್ರಮದ ವಿರುದ್ಧ ಕರ್ನಾಟಕ ಹೈಕೋರ್ಟ್ ಕಠಿಣ ನಿಲುವು ತಾಳಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಡ್ಡಾಯವಾಗಿ ಅನುಸರಿಸಬೇಕಾದ ಐದು ಪ್ರಮುಖ ಮಾರ್ಗಸೂಚಿಗಳನ್ನು ನ್ಯಾಯಾಲಯ ಹೊರಡಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಈ ಮಾರ್ಗಸೂಚಿಗಳನ್ನು ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ತಲುಪಿಸುವಂತೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದ ಸುದ್ದಿಯನ್ನು ‘ಕರ್ನಾಟಕ ಪೋರ್ಟ್ಫೋಲಿಯೋ’ ಎಂಬ ಎಕ್ಸ್ (X) ಖಾತೆ ಮರುಹಂಚಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಖಾತೆಯ ಆಡಳಿತಗಾರರ ವಿರುದ್ಧ BNS ಸೆಕ್ಷನ್ 353(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಆದರೆ, ಪೋಸ್ಟ್ ದುರುದ್ದೇಶದಿಂದ ಮಾಡಲಾಗಿದೆ ಅಥವಾ ಕೋಮು ದ್ವೇಷ ಉಂಟುಮಾಡುವ ಉದ್ದೇಶವಿದೆ ಎಂಬುದಕ್ಕೆ ಸಮರ್ಪಕ ಸಾಕ್ಷ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಎಫ್ಐಆರ್ ಅನ್ನು ರದ್ದುಗೊಳಿಸಿತು. ಇದೇ ವಿಚಾರಣೆ ವೇಳೆ ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿತು.
ಹೈಕೋರ್ಟ್ ನೀಡಿದ 5 ಪ್ರಮುಖ ಮಾರ್ಗಸೂಚಿಗಳು
- ಅಪರಾಧದ ಅಂಶಗಳ ಸಮಗ್ರ ಪರಿಶೀಲನೆ ದೂರು ಬಂದ ತಕ್ಷಣ ಎಫ್ಐಆರ್ ದಾಖಲಿಸುವ ಬದಲು, ಆರೋಪವು ಕಾನೂನಿನ ಪ್ರಕಾರ ಅಪರಾಧದ ಅಂಶಗಳನ್ನು ಹೊಂದಿದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ಕಾನೂನು ವಿಧಿಗಳನ್ನು ಯಾಂತ್ರಿಕವಾಗಿ ಅನ್ವಯಿಸಬಾರದು.
- ಒಂದೇ ಘಟನೆಗೆ ಬಹು FIR ಬೇಡ ಒಂದೇ ಘಟನೆಗೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದರೆ, ದೂರುದಾರರು ಬೇರೆ ವ್ಯಕ್ತಿಯಾಗಿದ್ದರೂ ಮತ್ತೊಂದು ಹೊಸ ಎಫ್ಐಆರ್ ದಾಖಲಿಸಬಾರದು.
- ಪ್ರಾಥಮಿಕ ತನಿಖೆಗೆ ಆದ್ಯತೆ ಬಂಧನ ಅಥವಾ ಎಫ್ಐಆರ್ ದಾಖಲಿಸುವ ಮೊದಲು, BNSS ಸೆಕ್ಷನ್ 173(3) ಅಡಿಯಲ್ಲಿ ಅವಕಾಶವಿದ್ದರೆ ಪ್ರಾಥಮಿಕ ತನಿಖೆ ನಡೆಸಬೇಕು.
- ಟೀಕೆ ಮಾಡಿದರೆ ಮಾತ್ರ ಅಪರಾಧವಲ್ಲ ಸರ್ಕಾರ ಅಥವಾ ವ್ಯಕ್ತಿಗಳ ವಿರುದ್ಧದ ಟೀಕೆ ಅಥವಾ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೇ ಅಪರಾಧವೆಂದು ಪರಿಗಣಿಸಬಾರದು. BNS ಸೆಕ್ಷನ್ 353(2) ಅನ್ವಯಿಸಲು ಪೋಸ್ಟ್ನ ಉದ್ದೇಶ, ಪರಿಣಾಮ ಹಾಗೂ ಇತರ ಕಾನೂನು ಅಂಶಗಳನ್ನು ಪರಿಶೀಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು.
- ಬಂಧನಕ್ಕೂ ಮುನ್ನ ನೋಟಿಸ್ ಬಂಧನ ಅನಿವಾರ್ಯವಲ್ಲದ ಸಂದರ್ಭಗಳಲ್ಲಿ BNS ಸೆಕ್ಷನ್ 35(3) ಹಾಗೂ ಅರ್ನೇಶ್ ಕುಮಾರ್ ತೀರ್ಪಿನ ಮಾರ್ಗಸೂಚಿಗಳಂತೆ ಮೊದಲು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಬೇಕು. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಬಂಧಿಸುವುದು ಸೂಕ್ತವಲ್ಲ.
ಮಹತ್ವದ ಸಂದೇಶ
ಈ ತೀರ್ಪಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಜೊತೆಗೆ, ಪೊಲೀಸರ ಅಧಿಕಾರದ ಬಳಕೆ ಕಾನೂನುಬದ್ಧ ಹಾಗೂ ಸಮಂಜಸವಾಗಿರಬೇಕು ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ. ಯಾಂತ್ರಿಕವಾಗಿ ಎಫ್ಐಆರ್ ದಾಖಲಿಸುವುದು ಹಾಗೂ ತುರ್ತು ಬಂಧನ ನಡೆಸುವ ಕ್ರಮವನ್ನು ನ್ಯಾಯಾಲಯ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.

