KRGRV
Sunday, October 25, 2026
Homeಬೆಂಗಳೂರುಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ ಉಮ್ರಾ ಯಾತ್ರಿಕರ ನೆರವಿಗೆ ರಾಜ್ಯ ಸರ್ಕಾರದಿಂದ ತುರ್ತು ಸಹಾಯವಾಣಿ ಆರಂಭ

ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ ಉಮ್ರಾ ಯಾತ್ರಿಕರ ನೆರವಿಗೆ ರಾಜ್ಯ ಸರ್ಕಾರದಿಂದ ತುರ್ತು ಸಹಾಯವಾಣಿ ಆರಂಭ

ಬೆಂಗಳೂರು, ಅಕ್ಟೋಬರ್ 23 : ಸೌದಿ ಅರೇಬಿಯಾದಲ್ಲಿ ವಿಮಾನ ಸೇವೆಗಳಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಕರ್ನಾಟಕದ ಸುಮಾರು 600 ಉಮ್ರಾ ಯಾತ್ರಿಕರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಸಿಲುಕಿರುವ ಯಾತ್ರಿಕರ ನೆರವಿಗಾಗಿ ತುರ್ತು ಸಹಾಯವಾಣಿಗಳನ್ನು ಆರಂಭಿಸಿದೆ.

​ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ನೀಡಿರುವ ಮಾಹಿತಿಯಂತೆ, ರಾಜ್ಯದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಸುಮಾರು 600 ಯಾತ್ರಿಕರು ವಿಮಾನಗಳ ರದ್ದು ಹಾಗೂ ವೇಳಾಪಟ್ಟಿ ವ್ಯತ್ಯಯದಿಂದಾಗಿ ತಾಯ್ನಾಡಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದಾರೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಗಳು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಹಾಗೂ ಟೂರ್ ಆಪರೇಟರ್‌ಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳನ್ನು ನಡೆಸುತಿವೆ.

​ಸಹಾಯವಾಣಿ ಸಂಪರ್ಕ ವಿವರಗಳು:

​ಸಿಲುಕಿರುವ ಕನ್ನಡಿಗ ಯಾತ್ರಿಕರು ಮತ್ತು ಅವರ ಕುಟುಂಬದವರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ರಾಜ್ಯ ಹಜ್ ಇಲಾಖೆಯು ಸಹಾಯವಾಣಿಗಳನ್ನು ಸಕ್ರಿಯಗೊಳಿಸಿವೆ.

​ರಾಜ್ಯ ಹಜ್ ಇಲಾಖೆ ಸಹಾಯವಾಣಿ ಸಂಖ್ಯೆಗಳು: 9483503132, 7899707775

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC): 1070 ಅಥವಾ 080-22253707

​ಅಲ್ಲದೆ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ಮಿಷನ್‌ಗಳು ಕೂಡ 24×7 ನಿಯಂತ್ರಣ ಕೊಠಡಿಗಳನ್ನು ತೆರೆದಿವೆ:

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ:

ದೂರವಾಣಿ ಸಂಖ್ಯೆಗಳು: +966-554412016, +966-542126784. ಉಚಿತ ದೂರವಾಣಿ (ಸೌದಿ ಅರೇಬಿಯಾದ ಒಳಗಿನ ಕರೆಗಳಿಗೆ ಮಾತ್ರ): 8002471234. ವಾಟ್ಸಾಪ್ (ಸಂದೇಶಗಳಿಗೆ ಮಾತ್ರ): +966-536216082.

​ಜಿದ್ದಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ:

ದೂರವಾಣಿ ಸಂಖ್ಯೆಗಳು: +966-12-2614093, +966-556122301. ವಾಟ್ಸಾಪ್: +966-536209704.

ಇಮೇಲ್: pbskcgi@gmail.com.

​ಸಾರ್ವಜನಿಕರು ಮತ್ತು ಯಾತ್ರಿಕರಿಗೆ ಸಲಹೆ:

​ಪ್ರಸ್ತುತ ಪರಿಸ್ಥಿತಿಯು ಬದಲಾಗುತ್ತಿರುವುದರಿಂದ, ಉಮ್ರಾ ಯಾತ್ರಿಕರು ಹಾಗೂ ಅವರ ಕುಟುಂಬಸ್ಥರು ವಿಮಾನ ನಿಲ್ದಾಣಗಳಿಗೆ ತೆರಳುವ ಮುನ್ನ ತಮ್ಮ ವಿಮಾನಯಾನ ಸಂಸ್ಥೆಗಳು ಮತ್ತು ಟೂರ್ ಆಪರೇಟರ್‌ಗಳನ್ನು ಸಂಪರ್ಕಿಸಿ ವಿಮಾನಗಳ ವಿವರಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಯಾತ್ರಿಕರು ಧೈರ್ಯದಿಂದಿರಲು ಹಾಗೂ ರಾಯಭಾರ ಕಚೇರಿ ಮತ್ತು ಸ್ಥಳೀಯ ಆಡಳಿತ ನೀಡುವ ಅಧಿಕೃತ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ