ಬೀಳಗಿ: ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಬಿರೇಶ್ವರ ದೇವಸ್ಥಾನದ ಬಳಿ ನಡೆದಿದ್ದ ವೃದ್ಧೆ ಗೌರವ್ವ ಅಯ್ಯಪ್ಪ ಕೊಡೇಕಲ್ ಅವರ ಕೊಲೆ ಪ್ರಕರಣವನ್ನು ಪೊಲೀಸರು ಆರು ತಿಂಗಳ ಬಳಿಕ ಯಶಸ್ವಿಯಾಗಿ ಭೇದಿಸಿದ್ದಾರೆ.
ಪ್ರಕರಣದ ಆರೋಪಿಗಳ ಸುಳಿವು ಸಿಗದೆ ಇದ್ದರಿಂದ ಭಾಗಕೋಟ ಎಸ ಪಿ ರವರು ಸಿಪಿಐ ಚಂದ್ರಶೇಖರ ಹೆರಕಲ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆಗೆ ಆದೇಶ ನೀಡಿದರು ಈ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕೊಲೆ ಪ್ರಕರಣದ ಆರೋಪಿಗಳನ್ನು 3 ದಿನಗಳಲ್ಲಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.
ಪ್ರಕರಣದಲ್ಲಿ ಮೃತ ವೃದ್ಧೆಯ ಕುಟುಂಬದವರೇ ಆರೋಪಿಗಳಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಮೃತಳ ಹಿರಿಯ ಮಗನ ಪತ್ನಿ ಶಾಂತವ್ವ ಸದಾಶಿವ ಕೊಡೇಕಲ್, ಮೃತಳ ಕಿರಿಯ ಮಗ ಪಡಿಯಪ್ಪ ಅಯ್ಯಪ್ಪ ಕೊಡೇಕಲ್ ಹಾಗೂ ಮೃತಳ ಹಿರಿಯ ಮಗನ ಪತ್ನಿಯ ಅಕ್ಕನ ಮಗ ಶಂಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ವೃದ್ಧೆ ಗೌರವ್ವ ಅಯ್ಯಪ್ಪ ಕೊಡೇಕಲ್ ಅವರನ್ನು ಕೊಲೆ ಮಾಡಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ನಡೆಸಿದ ತನಿಖೆಯಿಂದ ಪ್ರಕರಣದ ಸತ್ಯಾಂಶ ಬಯಲಾಗಿದ್ದು, ಆರೋಪಿಗಳನ್ನು ಕಾನೂನಿನ ವಶಕ್ಕೆ ಪಡೆಯಲಾಗಿದೆ.
ಆರು ತಿಂಗಳಿನಿಂದ ಪತ್ತೆಯಾಗದಿದ್ದ ಪ್ರಕರಣವನ್ನು ಚುರುಕಿನ ತನಿಖೆ ಮೂಲಕ ಭೇದಿಸಿದ ವಿಶೇಷ ತಂಡ ಸಿಪಿಐ ಚಂದ್ರಶೇಖರ ಹೆರಕಲ್ ಹಾಗೂ ಅವರ ತಂಡದ ಕಾರ್ಯಕ್ಕೆ ಬಾಗಲಕೋಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

