ಬೆಂಗಳೂರು: ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕ v/s ಬಿಜೆಪಿ ಎಂಪಿ ಜಗಳ ತಾರಕಕ್ಕೇರಿದ್ದು, ಲೋಕಸಭಾ ಸದಸ್ಯ, ಕೇಂದ್ರ ಸಚಿವ ಭಗವಂತ್ ಖೂಬಾ ಮತ್ತು ಔರಾದ್ ಶಾಸಕ ಪ್ರಭು ಚೌವ್ಹಾಣ್ ನಡುವಿನ ಮನಸ್ಥಾಪ ಬೀದಿಗೆ ಬಂದು ನಿಂತಿದೆ.
ಸಚಿವ ಖೂಬಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಚೌವ್ಹಾಣ್, ಭಗವಂತ್ ಖೂಬಾ ಹಾಗೂ ಬೆಂಬಲಿಗರಿಂದ ನನಗೆ, ನನ್ನ ಕುಟುಂಬಕ್ಕೆ, ಬೆಂಬಲಿಗರಿಗೆ ಜೀವ ಬೆದರಿಕೆ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಬೀದರ್ ಎಸ್‌ಪಿ ಹಾಗೂ ಐಜಿಗೆ ಪತ್ರ ಅವರು ಬರೆದಿರುವ ಪತ್ರವನ್ನ ಪ್ರದರ್ಶಿಸಿದರು.
‘ಭಗವಂತ್ ಖೂಬಾ ಗುಂಡಾಗಳನ್ನ ಹಾಕಿಕೊಂಡು ತಿರುಗುತ್ತಿದ್ದಾರೆ. ನನಗೆ, ನನ್ನ ಕುಟುಂಬದವರಿಗೆ, ನನ್ನ ಬೆಂಬಲಿಗರಿಗೆ ಏನಾದರೂ ಆದರೆ ಅದಕ್ಕೆ ಖೂಬಾ ನೇರ ಹೊಣೆ. ಖೂಬಾ ಅವರು ಹಲವು ದಿನಗಳಿಂದ ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ಕ್ಷೇತ್ರದಲ್ಲಿನ ನನ್ನ ಬೆಂಬಲಿಗರಿಗೆ ದೂರವಾಣಿ ಕರೆ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದಾರೆ. ಸಾರ್ವಜನಿಕರ ಸ್ಥಳಗಳಲ್ಲಿ ನನ್ನ ವಿರುದ್ಧ ಅವಾಚ್ಯ ಪದಬಳಕೆ ಮಾಡುತ್ತಿದ್ದಾರೆ. ನನಗೆ, ನನ್ನ ಬೆಂಬಲಿಗರ ಜೀವಕ್ಕೆ ಏನಾದರೂ ಹಾನಿ ಆದರೆ ಅದಕ್ಕೆ ಖೂಬಾ ಹಾಗೂ ಬೆಂಬಲಿಗರೇ ಕಾರಣ’ ಎಂದು ವಾಗ್ದಾಳಿ ನಡೆಸಿದರು.
ಸಚಿವ ಈಶ್ವರ ಖಂಡ್ರೆ ಜೊತೆ ಪ್ರಭು ಚೌವ್ಹಾಣ್ ಶಾಮೀಲಾಗಿದ್ದಾರೆ ಎಂದಿದ್ದ ಖೂಬಾ ಹೇಳಿಕೆಗೆ ಆಕ್ರೋಶ ಹೊರಹಾಕಿದ ಅವರು, ‘ಪಕ್ಷದ ವರಿಷ್ಠರು ಅನುಮತಿ ನೀಡಿದ್ರೆ ಕೇಂದ್ರ ಸಚಿವ ಖೂಬಾ ಹೇಳಿಕೆ ವಿರೋಧಿಸಿ ₹200 ಕೋಟಿ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದ ಅವರು, ‘ಖೂಬಾ ಹಟಾವೋ ಬಿಜೆಪಿ ಬಚಾವೋ’ ಎಂದರು.
‘ಲಂಬಾಣಿ ಆಯಾ ಎಂದು ನನ್ನನ್ನು ಹೀನವಾಗಿ ನೋಡಿದ್ದಾರೆ. ಅವರಿಂದ ನನಗೆ ತುಂಬಾ ಟಾರ್ಚರ್ ನೀಡಿದ್ದಾರೆ. ಪ್ರಭು ಚವ್ಹಾಣಗೆ ಕ್ಯಾನ್ಸರ್, ಹೆಚ್ಐವಿ ಆಗಲಿ, ಅವನು ಸತ್ತರೂ ನಾನು ಮಣ್ಣಿಗೆ ಹೋಗಲ್ಲಾ. ಪ್ರಭು ಚೌವ್ಹಾಣ್ ಆರೋಪದಿಂದ ನನಗೆ ನೋವಾಗಿದೆ, ಆಘಾತದವಾಗಿದೆ ಅಂತಾರೆ. ಖೂಬಾ ಗಂಡಸಾಗಿದ್ರೆ ಎದುರು ನಿಂತು ಮಾತಾಡಲಿ’ ಎಂದು ಸವಾಲು ಹಾಕಿದರು.