ಬೆಂಗಳೂರು : ವಿಧಾನಸಭೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದರೂ, ವಿಪಕ್ಷ ನಾಯಕನನ್ನು ಆಯ್ಕೆ ಮಾಡದೆ ರಾಜ್ಯ ಬಿಜೆಪಿ ತೀವ್ರ ಮುಖಭಂಗ ಎದುರಿಸಿತ್ತು. ಇದೀಗ ಹೈಕಮಾಂಡ್ ನಾಯಕರು ಅಳೆದು ತೂಗಿ ವಿಪಕ್ಷ ನಾಯಕನ ಸ್ಥಾನಕ್ಕೆ ಒಬ್ಬರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ವಿಪಕ್ಷ ನಾಯಕ ಸ್ಥಾನದ ರೇಸ್ ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರ್. ಅಶೋಕ್, ಅಶ್ವಥ ನಾರಾಯಣ, ವಿ. ಸೋಮಣ್ಣ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದರು. ಈ ಪೈಕಿ ಬಸವರಾಜ ಬೊಮ್ಮಾಯಿ, ಅಶ್ವಥ ನಾರಾಯಣ ಮತ್ತು ಆರ್.ಅಶೋಕ್ ಹೆಸರು ಹೈಕಮಾಂಡ್ ನಾಯಕರ ಅಂಗಳಕ್ಕೆ ತಲುಪಿತ್ತು. ಇದರಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಬೊಮ್ಮಾಯಿ ಹೆಸರು ಬಹುತೇಕ ಫಿಕ್ಸ್ ಆಗಿದೆ. ಈಗಾಗಲೇ ರಾಜ್ಯ ನಾಯಕರ ಜೊತೆ ಮೂರು ಸುತ್ತಿನ ಸಭೆ ನಡೆಸಿರುವ ಬಿಜೆಪಿ ಕೇಂದ್ರ ನಾಯಕರು, ಬೊಮ್ಮಾಯಿ ಹೆಸರು ಫೈನಲ್ ಮಾಡಿದ್ದು, ಮುಂದಿನ ತಿಂಗಳು ಮೊದಲ ವಾರದಲ್ಲಿ ವಿಪಕ್ಷ ನಾಯಕನ ಹೆಸರು ರಿವೀಲ್ ಮಾಡುವ ಸಾಧ್ಯತೆ ಇದೆ.
ಬೊಮ್ಮಾಯಿ ಯಾಕೆ ?: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೆಸರು ವಿಪಕ್ಷ ನಾಯಕನ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಪೊಲಿಟಿಕಲ್ 360ಗೆ ದೊರೆತಿದೆ. ವಿಪಕ್ಷ ನಾಯಕ ರೇಸ್ ನಲ್ಲಿ ಹಲವರು ಇದ್ದರೂ, ಹೈಕಮಾಂಡ್ ನಾಯಕರು ಬೊಮ್ಮಾಯಿ ಹೆಸರನ್ನು ಪರಿಗಣಿಸಿರುವುದರ ಹಿಂದೆ ಬಲವಾದ ಕಾರಣಗಳಿವೆ.
ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಅಶ್ವಥ ನಾರಾಯಣ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಈ ನಾಲ್ವರಲ್ಲಿ ಬೊಮ್ಮಾಯಿ ಕಾನೂನು ಬಲ್ಲವರು ಹಾಗೂ ವಿವಿಧ ಇಲಾಖೆಗಳ ಬಗ್ಗೆ ಅರಿವು ಇರುವ ಹಿರಿಯ ನಾಯಕರಾಗಿದ್ದಾರೆ. ಬೊಮ್ಮಾಯಿಗೆ ನೀರಾವರಿ ಬಗ್ಗೆಯೂ ಹೆಚ್ಚಿನ ಮಾಹಿತಿಯಿದೆ. ಆದರೆ, ಅಶೋಕ್, ಯತ್ನಾಳ್ ಹಾಗೂ ಅಶ್ವಥ್ ನಾರಾಯಣಗೆ ಕಾನೂನು ಮಾಹಿತಿಯಿಲ್ಲ. ಸಿಎಂಗೆ ಟಾಂಗ್ ಕೊಡಲು ಅರಿವಿನ ಕೊರತೆಯಿದೆ. ಯತ್ನಾಳ್ ಗೆ ಹಿಂದುತ್ವ ಬಿಟ್ಟರೆ, ಕಾನೂನು ಗೊತ್ತಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬೊಮ್ಮಾಯಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.