ಬೆಂಗಳೂರು: ಕಾವೇರಿ ನದಿ ನೀರು ವಿವಾದ ಕುರಿತು ಚರ್ಚಿಸಲು ಇಂದು(ಬುಧವಾರ) ಬೆಂಗಳೂರಿನ ವಿಧಾನಸೌಧದಲ್ಲಿ ಕರೆದಿದ್ದ ಸರ್ವಪಕ್ಷ ಸಭೆ ಆರಂಭವಾಗಿದೆ. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಎಚ್‌ಡಿ ಕುಮಾರಸ್ವಾಮಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಮಳೆ ಕೊರತೆ ಇದ್ದರೂ ತನಗೆ ಬಾಕಿ ಇರುವ ನೀರನ್ನು ಬಿಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರ ನಾಡಿನ ರೈತರ ಮತ್ತು ತಮಿಳುನಾಡಿಗೆ ಬಿಡಬೇಕಾದ ನೀರಿನ ಬಗ್ಗೆ ಚರ್ಚೆ ನಡೆಸಲು ಸರ್ವ ಪಕ್ಷಗಳ ಸಭೆ ಕರೆದಿದೆ.
ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ತಮಿಳುನಾಡು ತನ್ನ ಪಾಲಿನ ನೀರನ್ನು ಕರ್ನಾಟಕದಿಂದ ಹರಿಸಲು ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದೆ. ಇದನ್ನು ಮನ್ನಿಸಿರುವ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠ ವಿಚಾರಣೆಗೆ ಹೊಸ ಪೀಠ ರಚಿಸುವುದಾಗಿ ಹೇಳಿದೆ.