ಬೆಂಗಳೂರು: ಬರ ಪೀಡಿತ ಜಿಲ್ಲೆಗಳ ಘೋಷಣೆ ಹಾಗೂ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಟ್ವಿಟ್ಟರ್ (ಎಕ್ಸ್)ನಲ್ಲಿ ವಾಗ್ದಾಳಿ ನಡೆಸಿದೆ.
ಅಲ್ಲದೆ, ಬರ ಪೀಡಿತ ಭೂಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಗ್ರಾಫಿಕ್ ಮಾಡಿ, ‘ಬರ ಗ್ಯಾರಂಟಿ ಸಿಎಂ’ ಎಂದು ಬರೆದು ವ್ಯಂಗ್ಯವಾಡಿದೆ. ‘ಕಾಂಗ್ರೆಸ್ ಬಂದಿದೆ-ಬರಗಾಲ ತಂದಿದೆ. ರಾಜ್ಯದಲ್ಲಿ ಬರ ಆವರಿಸಿದೆ- ಹನಿ ನೀರಿಗೂ ಹಾಹಾಕಾರ ಶುರುವಾಗಿದೆ’ ಎಂದು ಬರೆದುಕೊಂಡಿದೆ.
ಮಂಗಳವಾರ ಬರ ಪೀಡಿತ ತಾಲೂಕುಗಳ ಘೋಷಣೆ ಮಾಡದ್ದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಇಷ್ಟೊತ್ತಿಗಾಗಲೇ ರಾಜ್ಯದಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆ ಆಗಬೇಕಿತ್ತು. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೆಪ ಹೇಳುತ್ತಾ ಮುಂದೂಡಿಕೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಮಧ್ಯೆ, ಬರದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಸೂಚಿಸಿರುವುದು ಕರ್ನಾಟಕಕ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಒಂದೆಡೆ ರೈತರ, ಚಳವಳಿಗಾರರ ಪ್ರತಿಭಟನೆಯ ಕಾವು ಏರತೊಡಗಿದೆ. ಅತ್ತ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಸುಪ್ರೀಂ ಕೋರ್ಟ್ ಎದುರು ಸಮರ್ಥ ವಾದ ಮಂಡಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.
ತಮಿಳುನಾಡಿಗೆ ಈಗಾಗಲೇ 15 ದಿನ 10 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ನೀರು ಹರಿಸಲಾಗಲ್ಲವೆಂದು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಹಾಕಿದ್ದಾರೆ. ರಾಜ್ಯ ಸರ್ಕಾರ ಇದಕ್ಕೆ ಬದ್ಧವಾಗಿರಬೇಕೆಂದು ಹೇಳಿದ್ದೇವೆ. ಸರ್ವಪಕ್ಷಸಭೆಯಲ್ಲಿ ಈ ರೀತಿ ನಿರ್ಧರಿದ್ದರೆ ಸರ್ಕಾರದ ಜೊತೆ ನಿಲ್ಲುತ್ತೇವೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.