ಪತ್ನಿ ಸ್ಪಂದನಾ ಅವರನ್ನು ನೆನೆದು ನಟ ವಿಜಯ್ ರಾಘವೇಂದ್ರ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ಸ್ಪಂದನ, ಹೆಸರಿಗೆ ತಕ್ಕ ಜೀವ, ಉಸಿರಿಗೆ ತಕ್ಕ ಭಾವ, ಅಳತೆಗೆ ತಕ್ಕ ನುಡಿ, ಬದುಕಿಗೆ ತಕ್ಕ ನಡೆ ಎಂದು ಮರೆಯಾದ ಮಡದಿ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
Vijay Raghavendra: ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ರಾಘವೇಂದ್ರ ನಿಧನರಾಗಿ ಎರಡು ವಾರ ಕಳೆಯುತ್ತ ಬಂತು. ಇಂದಿಗೂ ಆ ಎರಡೂ ಕುಟುಂಬಗಳಲ್ಲಿ ಕಣ್ಣೀರು ನಿಂತಿಲ್ಲ. ಅಲ್ಲಿ ಮಡುಗಟ್ಟಿದ ಮೌನ, ಉಮ್ಮಳಿಸಿ ಬರುವ ದುಃಖ ಕಡಿಮೆಯಾಗಿಲ್ಲ. ಎಲ್ಲಿ ನೋಡಿದರೂ ಸ್ಪಂದನಾ ಅವರ ಆ ನಗು ಮೊಗವೇ ಕಾಣುತ್ತಿದೆ. ಆ ಕಣ್ಣೀರಿನಲ್ಲಿಯೇ 11ನೇ ದಿನದ ಕಾರ್ಯವೂ ಮುಗಿದಿದೆ. ಇದೀಗ ಪತ್ನಿಯ ನಿಧನದ ಬಳಿಕ ವಿಜಯ್ ರಾಘವೇಂದ್ರ ಮೊದಲ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮಡದಿಯನ್ನು ನೆನಪಿಸಿಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಪ್ರೇಮ ವಿವಾಹ. ಇಬ್ಬರದ್ದು ಅತೀ ಆತ್ಮೀಯ ಬಂಧ. ಇನ್ನೇನು ಕೆಲ ದಿನಗಳಲ್ಲಿ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ತರಾತುರಿಯಲ್ಲಿತ್ತು ಈ ಮುದ್ದಾದ ಜೋಡಿ. ಆದರೆ ಅದ್ಯಾವ ಮಸಣೆ ಕಣ್ಣು ಬಿತ್ತೋ ಏನೋ, ಸ್ಪಂದನಾ ವಿದೇಶದಲ್ಲಿಯೇ ಹೃದಯಾಘಾತದಿಂದ ನಿಧನರಾದರು. ಅದಾದ ಬಳಿಕ ಕಂಡಿದ್ದು ಬರೀ ಕಣ್ಣೀರು. ಈ ಸಾವಿಗೆ ಯಾರ ಸಾಂತ್ವನವೂ ತಲುಪದು.
ಪತ್ನಿಗಾಗಿ ವಿಜಯ್ ಬರೆದ ಸಾಲುಗಳು
ಸ್ಪಂದನ
ಹೆಸರಿಗೆ ತಕ್ಕ ಜೀವ
ಉಸಿರಿಗೆ ತಕ್ಕ ಭಾವ
ಅಳತೆಗೆ ತಕ್ಕ ನುಡಿ
ಬದುಕಿಗೆ ತಕ್ಕ ನಡೆ
ನಮಗೆಂದೇ ಮಿಡಿದೆ ನಿನ್ನ ಹೃದಯವ
ನಿಲ್ಲದು ನಿನ್ನೊಂದಿಗಿನ ಕಲರವ
ನಾನೆಂದೂ ನಿನ್ನವ,
ಕೇವಲ ನಿನ್ನವ..
ಚಿನ್ನ…
https://www.instagram.com/reel/CwEl7D4M8Fk/?utm_source=ig_web_copy_link
ಹೀಗೆ ಪತ್ನಿಯನ್ನು ನೆನೆದು ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಪೋಸ್ಟ್ ಹಾಕಿದ್ದಾರೆ. ವಿಜಯ್ ಅವರ ಈ ಬಾವುಕ ಪೋಸ್ಟ್‌ಗೆ ಚಂದನವನದ ಸ್ನೇಹಿತರು ಹೃದಯದ ಎಮೋಜಿ ಹಾಕಿ ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಿದ್ದಾರೆ.
ಆಗಸ್ಟ್ 6ರಂದು ಸ್ಪಂದನಾ ನಿಧನ
ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6 ಭಾನುವಾರ ಅಲ್ಲಿನ ಹೋಟೆಲ್‌ನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಶಾಪಿಂಗ್ ಮುಗಿಸಿ ಬಂದಿದ್ದ ಸ್ಪಂದನಾ ನಿದ್ರೆ ಹೋದವರು ಮತ್ತೆ ಮೇಲೇಳಲೇ ಇಲ್ಲ ಎಂದು ಅವರ ಕುಟುಂಬದವರು ಮಾಹಿತಿ ನೀಡಿದ್ದರು. ಇಂದಿಗೆ (ಆಗಸ್ಟ್ 18) ಸ್ಪಂದನಾ ಅಗಲಿ 13 ದಿನಗಳಾದವು. ಬೆಂಗಳೂರಿನ ನಿವಾಸದಲ್ಲಿ 11ನೇ ದಿನಕ್ಕೆ ಕುಟುಂಬದವರೆಲ್ಲ ಸೇರಿ ಉತ್ತರ ಕ್ರಿಯೆಯ ವಿಧಿ ವಿಧಾನವನ್ನೂ ನೆರವೇರಿಸಲಾಗಿದೆ.
ಉತ್ತರ ಕ್ರಿಯೆ
ಆಗಸ್ಟ್ 11ರಂದು ಮಂಡ್ಯದ ಪಶ್ಚಿಮ ವಾಹಿನಿಯಲ್ಲಿ ಸ್ಪಂದನಾ ಅಸ್ಥಿಯನ್ನು ಬಿಡಲಾಗಿತ್ತು. ಅದೇ ದಿನ ಸ್ಪಂದನಾ ಹೆಸರಿನಲ್ಲಿ ನಕ್ಷತ್ರ ಹೋಮ ಮಾಡಿಸಿ, ಪುತ್ರ ಶೌರ್ಯ ಕೇಶಮುಂಡನ ಮಾಡಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸ್ಪಂದನಾ ಅವರ ಇಷ್ಟದ ಖಾದ್ಯಗಳನ್ನು ಮಾಡಿ ಸ್ಪಂದನಾ ಅಂತ್ಯಕ್ರಿಯೆ ನೆರವೇರಿಸಲಾದ ಸ್ಥಳದಲ್ಲಿ ಇಟ್ಟು ಪೂಜೆ ಮಾಡಲಾಗಿತ್ತು. ಯಂಗ್ ಸ್ಟಾರ್ ಕಬ್ಬಡ್ಡಿ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಸಹ ಮಾಡಲಾಗಿತ್ತು. 80ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಕಾರ್ಯದಲ್ಲಿ ಭಾಗವಹಿಸಿ ವೆಜ್ ಪಲಾವ್, ರಾಯತಾ, ಲಾಡು, ಉದ್ದಿನ ವಡೆ, ಕೋಸಂಬರಿ, ಪಾಯಸ ಸೇರಿದಂತೆ ಸುಮಾರು 21 ರೀತಿಯ ಅಡುಗೆಗಳನ್ನು ತಯಾರಿಸಲಾಗಿತ್ತು.