KRGRV
Saturday, October 31, 2026
Homeಜಿಲ್ಲಾ ಸುದ್ದಿಗಳುಕೃಷ್ಣಾ ಶುಗರ್ ಫ್ಯಾಕ್ಟರಿ ರೈತರಿಗೆ ವರದಾನ, ಉದ್ಯೋಗವೇ ಶ್ರೇಷ್ಠ: ಶಿವಾನಂದ ಭಾರತಿ ಶ್ರೀಗಳುಕಾರ್ಖಾನೆಯ ಉಳಿವು ರೈತರ...

ಕೃಷ್ಣಾ ಶುಗರ್ ಫ್ಯಾಕ್ಟರಿ ರೈತರಿಗೆ ವರದಾನ, ಉದ್ಯೋಗವೇ ಶ್ರೇಷ್ಠ: ಶಿವಾನಂದ ಭಾರತಿ ಶ್ರೀಗಳುಕಾರ್ಖಾನೆಯ ಉಳಿವು ರೈತರ ಕೈಯಲ್ಲಿದೆ, ಪ್ರತಿ ಸದಸ್ಯರು ಕನಿಷ್ಠ 50 ಟನ್ ಕಬ್ಬು ಪೂರೈಸಿ: ಅಧ್ಯಕ್ಷ ಪರಪ್ಪ ಸವದಿ ಮನವಿ

ಅಥಣಿ: ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಈ ಭಾಗದ ರೈತರಿಗೆ ಉತ್ತಮ ಬದುಕು ರೂಪಿಸಿಕೊಡುವ ಮಹತ್ವದ ಸಂಸ್ಥೆಯಾಗಿದೆ. ರೈತರು ಮತ್ತು ಕಾರ್ಖಾನೆ ಪರಸ್ಪರ ಸಹಕಾರ ಹಾಗೂ ವಿಶ್ವಾಸದಿಂದ ಮುನ್ನಡೆದಾಗ ಮಾತ್ರ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪರಮಪೂಜ್ಯ ಶಿವಾನಂದ ಭಾರತಿ ಶ್ರೀಗಳು ಹೇಳಿದರು.

ಅಥಣಿ ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಮನುಷ್ಯನ ಜೀವನದಲ್ಲಿ ಉದ್ಯೋಗಕ್ಕೆ ಅತ್ಯಂತ ಮಹತ್ವವಿದೆ. ಉದ್ಯೋಗಶೀಲರಾದವರನ್ನು ಸಮಾಜದಲ್ಲಿ ಶ್ರೇಷ್ಠರೆಂದು ಪರಿಗಣಿಸಲಾಗುತ್ತದೆ. ‘ಉದ್ಯೋಗಂ ಪುರುಷ ಲಕ್ಷಣಂ’ ಎಂಬಂತೆ ಪರಿಶ್ರಮ ಮತ್ತು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡಿದಾಗ ಮಾತ್ರ ಸಂಪತ್ತು ಹಾಗೂ ಸಮೃದ್ಧಿ ದೊರೆಯುತ್ತದೆ ಎಂದರು.

ಕೃಷ್ಣಾ ಸಕ್ಕರೆ ಕಾರ್ಖಾನೆ ರೈತರಿಗೆ ಅಗತ್ಯವಾದ ಸಹಕಾರ ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಪ್ರಗತಿಗೆ ನೆರವಾಗುತ್ತಿದೆ. ಆದ್ದರಿಂದ ರೈತರು ತಮ್ಮ ಹೊಲಗಳಲ್ಲಿ ಬೆಳೆದ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ತಮ್ಮದೇ ಕಾರ್ಖಾನೆಗೆ ಪೂರೈಸುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಬೇಕು. ಪರಸ್ಪರ ಸಹಕಾರದಿಂದ ರೈತರು ಹಾಗೂ ಕಾರ್ಖಾನೆ ಎರಡೂ ಅಭಿವೃದ್ಧಿ ಹೊಂದಲು ಸಾಧ್ಯ. ಕಾರ್ಖಾನೆಯನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಖಾನೆಯ ಉಳಿವು ರೈತರ ಕೈಯಲ್ಲಿದೆ: ಪರಪ್ಪ ಸವದಿ
ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಪರಮಪೂಜ್ಯ ಶಿವಾನಂದ ಭಾರತಿ ಅಪ್ಪಾಜಿಯವರ ಆಶೀರ್ವಾದದಿಂದ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ದೊರೆತಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ರೈತರು ಹಾಗೂ ಆಡಳಿತ ಮಂಡಳಿಯ ಸಹಕಾರ ಮತ್ತು ಆಶೀರ್ವಾದ ಅಗತ್ಯವಿದೆ ಎಂದರು.

ಕಾರ್ಖಾನೆಯಲ್ಲಿ ಸುಮಾರು 13 ಸಾವಿರ ಕಬ್ಬು ಬೆಳೆಗಾರ ಸದಸ್ಯರಿದ್ದಾರೆ. ಪ್ರತಿಯೊಬ್ಬ ಸದಸ್ಯರು ಕನಿಷ್ಠ 50 ಟನ್ ಕಬ್ಬು ಪೂರೈಸಿದರೆ ಒಟ್ಟು 6.50 ಲಕ್ಷ ಟನ್ ಕಬ್ಬು ಸಂಗ್ರಹವಾಗಲಿದೆ. ಇತರ ರೈತರಿಂದಲೂ ಕಬ್ಬು ಪೂರೈಕೆಯಾದರೆ ಒಟ್ಟು 7ರಿಂದ 8 ಲಕ್ಷ ಟನ್ ಕಬ್ಬು ನುರಿಸುವ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಖಾನೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ರೈತರ ಕೈಯಲ್ಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸಿದರೆ ಮಾತ್ರ ಕಾರ್ಖಾನೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ. ರೈತರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ. ಕಬ್ಬಿನ ತೂಕ ಹಾಗೂ ಬಿಲ್ ಪಾವತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ರೈತರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಕಳೆದ ವರ್ಷವೂ ರೈತರಿಗೆ ಆದ್ಯತೆ ನೀಡಿ ಇತರ ಕಾರ್ಖಾನೆಗಳಿಗಿಂತ ಮೊದಲೇ ಬಿಲ್ ಪಾವತಿಸಲಾಗಿದೆ. ಈ ವರ್ಷವೂ ರೈತರಿಗೆ ಉತ್ತಮ ರೀತಿಯಲ್ಲಿ ಬಿಲ್ ಪಾವತಿಸಲು ಆಡಳಿತ ಮಂಡಳಿ ಸಿದ್ಧವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿವಿಧ ಮಾಹಿತಿಗಳಿಗೆ ಕಿವಿಗೊಡದೆ ರೈತರು ತಮ್ಮ ಕಾರ್ಖಾನೆಯ ಅಭಿವೃದ್ಧಿಗೆ ಸಹಕರಿಸಬೇಕು. ಎಲ್ಲ ರೈತರು ಒಗ್ಗಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸುವ ಮೂಲಕ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಗತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಸಂಜಯ ನಾಡಗೌಡ, ಎಸ್.ಎ. ವಾಗಮೋಡೆ, ಜಿ.ಎಂ. ತೇವರಮನಿ, ಎಸ್.ಡಿ. ನಂದೀಶ್ವರ, ಜಿ.ಎಂ. ಜತ್ತಿ, ಎಸ್.ಜೆ. ಪಾಟೀಲ, ಡಿ.ಎಸ್. ಕುಲಕರ್ಣಿ, ಎಸ್.ಎಸ್. ನಾಯಿಕ, ಎಂ.ಎಂ. ಗೊಟಕಿಂಡಿ, ಎಸ್.ಎಚ್. ನಾಯಿಕ, ಆರ್.ಎ. ಪಟ್ಟಣ, ಎಚ್.ಐ. ಜಗದೇವ, ಪಿ.ಸಿ. ಪಾಟೀಲ, ವಿ.ಎಂ. ಪಾಟೀಲ, ಜಿ.ಎಂ. ಪಾಟೀಲ, ಮಲ್ಲೇಶ ಸವದಿ, ಶಿವು ಸವದಿ,ಮಲ್ಲೇಶ್ ಮಲಕಾರಿ, ರಮೇಶ್ ಸವದಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ರೈತರು ಹಾಗೂ ಕಾರ್ಖಾನೆ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಖಾನೆ ವ್ಯವಸ್ಥಾಪಕ ಸುರೇಶ ಟಕ್ಕಣ್ಣವರ ಸ್ವಾಗತಿಸಿ ವಂದಿಸಿದರು.

ಹೆಚ್ಚಿನ ಸುದ್ದಿ