ಬೆಂಗಳೂರು,ಸೆ.29: ರಾಜಾಜಿನಗರದ ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ “ಪ್ರತಿ ಹೃದಯ ಬಡಿತವೂ ಮಹತ್ವದ್ದು” ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ಹೃದಯ ದಿನ ಆಚರಿಸಲಾಯಿತು. ಹೃದಯ ಮತ್ತು ರಕ್ತನಾಳ ಸಂಬಂಧಿತ ಆರೋಗ್ಯ, ಹೃದಯ ಕಾಯಿಲೆಗಳ ತಡೆಗಟ್ಟುವಿಕೆ ಹಾಗೂ ಸಮಯೋಚಿತ ಆರೋಗ್ಯ ತಪಾಸಣೆಯ ಮಹತ್ವವನ್ನು ಕಾರ್ಯಕ್ರಮದಲ್ಲಿ ಪ್ರತಿಪಾದಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ. ವಿಜಯ ಕುಮಾರಿ, ಡೀನ್ ಡಾ. ಜಿತೇಂದ್ರ ಕುಮಾರ್, ಶೈಕ್ಷಣಿಕ ನೋಂದಣಾಧಿಕಾರಿ ಡಾ. ರಘುನಾಥ್, ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಶಾಂತಿನಿ, ಡಾ. ದೀಪಕ್ ಹಾಗೂ ಡಾ. ವೀರೇಂದ್ರ, ಜಂಟಿ ನಿರ್ದೇಶಕರಾದ ಬ್ರಿಜೇಶ್ ಮೀನಾ, ಉಪ ನಿರ್ದೇಶಕರಾದ ರಾಮರಾಜ್ ಮೀನಾ, ಸಹಾಯಕ ನಿರ್ದೇಶಕರಾದ ಅನುರಾಧಾ ಸುಬ್ರಮಣಿ, ಹೃದಯರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಂಜುಳಾ, ವಿಧಿ ವಿಜ್ಞಾನ ಔಷಧ ವಿಭಾಗದ ಮುಖ್ಯಸ್ಥರಾದ ಡಾ. ಸಂಗ್ರಾಮ್, ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಕುಬೇರನ್, ಮ್ಯಾಟ್ರನ್ಗಳಾದ ಸುಧಾಕರ್ ಮತ್ತು ಮಂಜುನಾಥ್ ಇ.ಎಸ್.ಐ.ಸಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ದೀಪ್ತಿ ಮತ್ತು ಡಾ. ಗಿರೀಶ್ ಎಂ.ಎಸ್. ಅವರು ಸಂಯೋಜಿಸಿದರು. ಮಂಜುನಾಥ್, ಚಿರಂಜೀವಿ, ಸಂತೋಷ್ ಅವರು ಕಾರ್ಯಕ್ರಮದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು.
ವೈದ್ಯಕೀಯ ಅಧೀಕ್ಷಕರಾದ ಡಾ. ವಿಜಯ ಕುಮಾರಿ ಮಾತನಾಡಿ, ಹೃದಯ ಸಂಬಂಧಿತ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವುದು, ಅವುಗಳನ್ನು ತಡೆಗಟ್ಟುವುದು ಹಾಗೂ ಆರಂಭಿಕ ಹಂತದಲ್ಲಿಯೇ ಕಾಯಿಲೆಗಳನ್ನು ಪತ್ತೆಹಚ್ಚಿದರೆ ಹೃದಯ ಸಮಸ್ಯೆಯನ್ನು ನಿಯಂತ್ರಿಸಬಹುದು. ಈ ಬಾರಿಯ ಧ್ಯೇಯವಾಕ್ಯದಂತೆ ಪ್ರತಿಯೊಂದು ಹೃದಯ ಬಡಿತವೂ ಮುಖ್ಯ. ಇದನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಡಾ. ರೇಖಾ, ಡಾ. ಪ್ರಶಾಂತ್ ಹಾಗೂ ಪ್ರಿಯದರ್ಶಿನಿ ಅವರು ಹೃದಯ ಕಾಯಿಲೆಗಳು, ಅವುಗಳ ಅಪಾಯದ ಅಂಶಗಳು, ತಡೆಗಟ್ಟುವ ಕ್ರಮಗಳು ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಹೃದಯ ದಿನದ ಪ್ರತಿಜ್ಞೆಯನ್ನು ಹೃದಯರೋಗ ವಿಭಾಗದ ಮುಖ್ಯಸ್ಥರಾದ ಡಾ. ಮಂಜುಳಾ ಬೋಧಿಸಿದರು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಎಲ್ಲರಿಗೂ ಕರೆ ನೀಡಿದರು.
ಹೃದಯ ಹಾಗೂ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

